ದೇಶ

ರಾಹುಲ್ ಗಾಂಧಿ ಒಬ್ಬ ಬ್ರಿಟಿಷ್ ಪ್ರಜೆ, ಅವರ ಭಾರತೀಯ ನಾಗರಿಕತ್ವ ರದ್ದುಗೊಳಿಸಿ: ಸ್ವಾಮಿ

Lingaraj Badiger

ನವದೆಹಲಿ: ಕಾಂಗ್ರೆಸ್ ವಿರುದ್ಧ ಮತ್ತೊಂದು ಸ್ಫೋಟಕ ಮಾಹಿತಿ ಹೊರ ಹಾಕಿರುವ ಬಿಜೆಪಿ ನಾಯಕ ಸುಬ್ರಮಣ್ಯಯನ್ ಸ್ವಾಮಿ ಅವರು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಒಬ್ಬ ಬ್ರಿಟಿಷ್ ಎಂಬುದಕ್ಕೆ ನನ್ನ ಬಳಿ ಸಾಕ್ಷ್ಯಗಳಿವೆ ಎಂದು ಸೋಮವಾರ ಹೇಳಿದ್ದಾರೆ.

ಲಂಡನ್‌ನಲ್ಲಿ ಖಾಸಗಿ ಕಂಪನಿ ಹೊಂದಿರುವ ರಾಹುಲ್ ಗಾಂಧಿ ಅವರು, ತಾನು ಒಬ್ಬ ಬ್ರಿಟಿಷ್ ಪ್ರಜೆ(2003ರಿಂದ 2009) ಎಂದು ಘೋಷಿಸಿಕೊಂಡಿದ್ದಾರೆ ಎಂದು ಸ್ವಾಮಿ ಆರೋಪಿಸಿದ್ದಾರೆ. ಅಲ್ಲದೆ ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಬಿಜೆಪಿ ನಾಯಕ, ಕಾಂಗ್ರೆಸ್ ಉಪಾಧ್ಯಕ್ಷರ ಭಾರತೀಯ ನಾಗರಿಕತ್ವ ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ.

'ರಾಹುಲ್ ಗಾಂಧಿ ಅವರ ಬ್ರಿಟಿಷ್ ನಾಗರಿಕತ್ವದ ಬಗ್ಗೆ ದಾಖಲೆಗಳ ಸಮೇತ ನಾನು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. 2003ರಲ್ಲಿ ಬ್ಯಾಕ್‌ಆಪ್ಸ್ ಲಿಮಿಟೆಡ್ ಎಂಬ ಕಂಪನಿ ನೋಂದಣಿಯಾಗಿದ್ದು, ಇದಕ್ಕೆ ರಾಹುಲ್ ಗಾಂಧಿ ಅವರೇ ನಿರ್ದೇಶಕರು ಮತ್ತು ನೋಂದಣಿ ದಾಖಲೆಗಳಲ್ಲಿ ತಾವು ಬ್ರಟಿನ್ ನಾಗರಿಕ ಎಂದು ಘೋಷಿಸಿಕೊಂಡಿದ್ದಾರೆ' ಎಂದು ಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಭಾರತೀಯ ಸಂವಿಧಾನದ ಕಲಂ 9ರ ಪ್ರಕಾರ ಯಾವುದೇ ಭಾರತೀಯ ಎರಡು ಪೌರತ್ವವನ್ನು ಹೊಂದುವಂತಿಲ್ಲ. ಹೀಗಾಗಿ ರಾಹುಲ್ ಗಾಂಧಿ ಅವರ ನಾಗರಿಕತ್ವ ರದ್ದುಗೊಳಿಸಬೇಕು ಎಂದರು.

ಆದರೆ ಸ್ವಾಮಿ ಆರೋಪವನ್ನು ತಳ್ಳಿಹಾಕಿರುವ ಕಾಂಗ್ರೆಸ್ ವಕ್ತಾರ ಅಜೇಯ್ ಮಾಕೇನ್ ಅವರು, ಪ್ರಚಾರಕ್ಕಾಗಿ ಕೀಳು ಹೇಳಿಕೆಗಳನ್ನು ನೀಡುವುದು ಸ್ವಾಮಿಯ ಸ್ವಭಾವವಾಗಿಬಿಟ್ಟಿದೆ. ಅವರ ಹೇಳಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದು ಹೇಳಿದ್ದಾರೆ.

SCROLL FOR NEXT