ಚೆನ್ನೈ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಚೆನ್ನೈ ದ್ವೀಪದಂತಾಗಿದ್ದು, ಜನರ ಅವಶ್ಯಕತೆಗಾಗಿ ಪ್ರಸಿದ್ದ ಓಲಾ ಸಂಸ್ಧೆ ಬೋಟ್ ಸೇವೆಯನ್ನು ಆರಂಭಿಸಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತಕ್ಕೆ ತಮಿಳುನಾಡು ಅಕ್ಷರಶ: ನಲುಗಿ ಹೋಗಿದೆ. ಚೆನ್ನೈ ಮತ್ತು ಕಾಂಚಿಪುರಂನಲ್ಲಿ ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆಗಾಗಿ ಆರ್ಮಿ ಮತ್ತು ಏರ್ ಫೋರ್ಸ್ ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದು, ಈ ಮಧ್ಯೆ ಮೊಬೈಲ್ ಟ್ಯಾಕ್ಸಿ ಸೇವೆ ಪೂರೈಸುವ ಓಲಾ ಪ್ರವಾಹದಲ್ಲಿ ಸಿಲುಕಿರುವವರಿಗಾಗಿ ಓಲಾ ಬೋಟ್ ಸೇವೆ ಆರಂಭಿಸಿದ್ದು, ನಿರಾಶ್ರಿತರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುತ್ತಿದೆ.
ನೀರಿನಲ್ಲಿ ಮುಳುಗಡೆಯಾಗಿರುವ ಜನವಸತಿ ಪ್ರದೇಶಗಳಲ್ಲಿ ಸಂಚರಿಸುವ ಓಲಾ ಬೋಟ್ ಅಲ್ಲಿನ ಜನರಿಗೆ ನೀರು, ಆಹಾರ ಸೇವೆಯನ್ನು ಉಚಿತವಾಗಿ ಒದಗಿಸುತ್ತಿದೆ. ಈ ಬೋಟ್ ನಲ್ಲಿ ಇಬ್ಬರು ಅಂಬಿಗರಿದ್ದು ಅವರು ತೀರ ಅಪಾಯದಲ್ಲಿರುವ 5 ರಿಂದು 9 ಜನರನ್ನು ಒಂದು ಬಾರಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದೆ.
ಈ ಬೋಸ್ ಸೇವೆ ಇನ್ನು ಮೂರು ದಿನಗಳ ಕಾಲ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಜಲಾವೃತಗೊಂಡಿರುವ ಪ್ರದೇಶಗಳಲ್ಲಿ ಮುಂದುವರೆಸುವ ಯೋಜನೆಯನ್ನು ಸಂಸ್ಥೆ ಇಟ್ಟುಕೊಂಡಿದೆ. ಈ ಮಧ್ಯೆ ತಮಿಳುನಾಡಿನಲ್ಲಿ ತಮ್ಮ ಮೊಬೈಲ್ ಟ್ಯಾಕ್ಸಿ ಸೇವೆಯನ್ನು ಇನ್ನಷ್ಟು ಗಾಢಗೊಳಿಸುವ ನಿಟ್ಟಿನಲ್ಲಿ ಸಂಸ್ಥೆ ಈ ಸೇವೆ ಆರಂಭಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.