ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮತ್ತೊಮ್ಮೆ ದೇಶದ ಜನತೆಗೆ ಸಹಿಷ್ಣುತೆಯ ಪಾಠ ಭೋದಿಸಿದ್ದಾರೆ. ``ವಿಶ್ವವೇ ಅಸಹಿಷ್ಣುತೆಯ ಆವೇಗವನ್ನು ಎದುರಿಸಲು ಕಷ್ಟಪ ಡುತ್ತಿರುವ ಈ ಸಂದರ್ಭದಲ್ಲಿ, ಆಧುನಿಕ ಭಾರತದ ವೈವಿಧ್ಯತೆಯ ಮೌಲ್ಯಗಳನ್ನು ಹೆಚ್ಚು ಭದ್ರಪಡಿಸುತ್ತಾ, ಅದನ್ನು ಜಗತ್ತಿಗೇ ಪಸರಿಸುವ ಕೆಲಸ ಮಾಡಬೇಕಿದೆ'' ಎಂದು ರಾಷ್ಟ್ರಪತಿ ಪ್ರಣಬ್ ಹೇಳಿದ್ದಾರೆ.
ಶನಿವಾರ ದೆಹಲಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ``ಮಾನವಕುಲವು ಹಿಂದೆಂದೂ ಕಾಣದ ದ್ವೇಷಪೂರಿತ ವಾತಾವರಣ ಈಗ ನಿರ್ಮಾಣವಾಗಿದೆ. ಇಂಥ ಸಂದರ್ಭದಲ್ಲಿ ನಮಗೆ ನಾವೇ ಉನ್ನತ ಮೌಲ್ಯಗಳು, ಲಿಖಿತ ಹಾಗೂ ಅಲಿಖಿತ ಸಂಸ್ಕಾರಗಳು, ಕರ್ತವ್ಯಗಳು ಹಾಗೂ ಜೀವನಕ್ರಮವನ್ನು ನೆನಪಿಸಿಕೊಳ್ಳುವ ಅಗತ್ಯವಿದೆ'' ಎಂದರು.
ಭಾರತವು ಎಂತಹ ಉನ್ನತ ಮೌಲ್ಯಗಳಿಗೆ ಹೆಸರುವಾಸಿಯಾಗಿದೆ ಎಂಬುದನ್ನು ಮತ್ತೊಮ್ಮೆ ವಿವರಿಸುತ್ತಾ ರಾಷ್ಟ್ರಪತಿ ಪ್ರಣಬ್ ಅವರು, `ಜಗತ್ತು ಇನ್ನಷ್ಟೇ ಭಾರತದಿಂದ ಸಹಿಷ್ಣುತೆ ಮಾತ್ರವಲ್ಲ ಕರುಣೆಯ ಪಾಠವನ್ನೂ ಕಲಿಯಬೇಕಿದೆ' ಎಂಬ ಸ್ವಾಮಿ ವಿವೇಕಾನಂದರ ಸಂದೇಶವನ್ನೂ ಉಲ್ಲೇಖಿಸಿದರು.