ದೇಶ

ಜನನ ಪ್ರಮಾಣಪತ್ರದಲ್ಲೇ ಜಾತಿ ನಮೂದಿಗೆ ಪ್ರಸ್ತಾಪ

Mainashree
ನವದೆಹಲಿ: ದಲಿತ ಸಮುದಾಯದ ವಿದ್ಯಾರ್ಥಿಗಳು ಕೇಂದ್ರ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸುವಾಗ ಎದುರಿಸುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಜಾತಿ ಮತ್ತು ವಾಸ ಪ್ರಮಾಣ ಪತ್ರ ಸುಲಭವಾಗಿ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ಹೊಸ ಚಿಂತನೆ ನಡೆಸಿದೆ. ಇನ್ನು ಮುಂದೆ ದಲಿತ ಮಕ್ಕಳ ಜನನ ಪ್ರಮಾಣ ಪತ್ರದಲ್ಲೇ ಜಾತಿಯನ್ನು ನಮೂದಿಸುವ ನಿರ್ಧಾರಕ್ಕೆ ಬಂದಿದೆ. 
ಈ ಸಂಬಂಧ ಹೊಸ ನಿಯಮಾವಳಿ ರೂಪಿಸಲು ಕೇಂದ್ರ ಸರ್ಕಾರ ಎಲ್ಲ ಕೇಂದ್ರಾಡಳಿತ ಮತ್ತು ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿ ಸುತ್ತೋಲೆ ಹೊರಡಿಸಿದೆ. ಹೊಸ ನಿಯಮಾವಳಿ ಜಾರಿಯಾದರೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಶಾಲೆಗಳೇ ಎಸ್ಸಿ ಮತ್ತು ಎಸ್ಟಿ ಮಕ್ಕಳು ಎಂಟನೇ ತರಗತಿಯಲ್ಲಿರುವಾಗಲೇ ಜಾತಿ ಹಾಗೂ ವಾಸ ಸ್ಥಾನ ದೃಢೀಕರಣ ಪತ್ರ ನೀಡಬೇಕಿದೆ. 
ಕೇಂದ್ರ ಸರ್ಕಾರದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಎಸ್ಸಿ, ಎಸ್ಟಿ ವಿದ್ಯಾರ್ಥಿಗಲು ಜಾತಿ ಹಾಗೂ ಅವಾಸಸ್ಥಾನ ಪ್ರಮಾಣ ಪತ್ರ ಪಡೆಯಲು ತೀವ್ರ ತೊಂದರೆ ಎದುರಿಸುತ್ತಾರೆ. ಈ ಸಂಬಂಧ ಸರ್ಕಾರಕ್ಕೆ ಆಗಾಗ ದೂರುಗಳು ಸಲ್ಲಿಕೆಯಾಗುತ್ತಲೇ ಬಂದಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇಂಥದ್ದೊಂದು ಚಿಂತನೆ ನಡೆಸಿದೆ. 
ಈ ಹೊಸ ಕರಡು ನಿಯಮಾವಳಿಯಂತೆ ಆಯಾ ಶಾಲೆಯ ಪ್ರಾಂಶುಪಾಲರೇ ಮಕ್ಕಳಿಂದ ಅರ್ಜಿಯನ್ನು ಸ್ವೀಕರಿಸಿ ಎಂಟನೇ ತರಗತಿಯಲ್ಲೇ ಜಾತಿ ಹಾಗೂ ವಾಸಸ್ಥಳ ದಢೀಕರಣ ಪತ್ರ ನೀಡುವಂತೆ ಮಾಡುವುದು ಕೇಂದ್ರದ ಉದ್ದೇಶ. ಶಾಲೆಯಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿ ಸರ್ಕಾರಗಳು ಪ್ರಮಾಣಪತ್ರವನ್ನು ನೀಡಬೇಕು. ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳು ಅಥವಾ ಇತರೆ ಯಾವುದೇ ಕಾಲಮಿತಿಯೊಳಗೆ ಪ್ರಮಾಣ ಪತ್ರ ನೀಡುವ ಕಾರ್ಯ ಮುಗಿಸಬೇಕು. ನಂತರ ಅದನ್ನು ಶಾಲೆಯ ಮೂಲಕವೇ ಮಕ್ಕಳಿಗೆ ವಿತರಿಸಬೇಕು ಎಂದು ನಿಯಮಾವಳಿಯಲ್ಲಿ ಹೇಳಲಾಗಿದೆ.
SCROLL FOR NEXT