ಹೈದರಾಬಾದ್: ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಅಂತಾರೆ. ಆದರೆ ಇನ್ನು ಮುಂದೆ ವಿಚ್ಛೇ ದನಗಳು ಮಾತ್ರ ಸಾಮಾಜಿಕ ಜಾಲತಾಣಗಳಲ್ಲೇ ನಡೆಯುವಂತೆ ಕಾಣುತ್ತಿವೆ.
ಇತ್ತೀಚೆಗಷ್ಟೇ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ವಾಟ್ಸ್‍ಆ್ಯಪ್‍ನಲ್ಲೇ ವಿಚ್ಛೇದನ ನೀಡಿದ ಸಂಗತಿ ಭಾರಿ ಸುದ್ದಿಯಾಗಿತ್ತು. ಈಗ ಹೈದಾರಾಬಾದ್‍ನ ಸ್ಥಳೀಯ ಕೋರ್ಟೊಂದರಲ್ಲಿ ಸ್ಕೈಪ್‍ನಲ್ಲಿ ವಿಚಾರಣೆ ನಡೆಸಿ ಮದುವೆಯೊಂದನ್ನು ಅನೂರ್ಜಿತಗೊಳಿಸಲಾಗಿದೆ. ಬಹುಶಃ ಸ್ಕೈಪ್ ಮೂಲಕ ಡೈವೋರ್ಸ್ ನೀಡಿದ ದೇಶದ ಮೊದಲ ಪ್ರಕರಣ ಇದಾಗಿದೆ.
ಅಸಲಿಗೆ ಆಗಿದ್ದೇನೆಂದರೆ, 2002ರಲ್ಲಿ ವಿವಾಹವಾಗಿದ್ದ ಈ ದಂಪತಿ ನಡುವೆ ಮೊದಲಿನಿಂದಲೂ ಮನಸ್ತಾಪ ಇತ್ತು. ಈ ಹಿನ್ನೆಲೆಯಲ್ಲಿ ಮದುವೆಯನ್ನು ಅನೂರ್ಜಿತಗೊಳಿಸುವಂತೆ ಪತಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರೆ, ಪತ್ನಿ ತನ್ನ ಅತ್ತೆ ಮಾವಂದಿರ ಮೇಲೆ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಯುವ ವೇಳೆ ಮಹಿಳೆ ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದರು. ಜತೆಗೆ, ಈಗಷ್ಟೇ ವಿಕ್ಷನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಸಂದರ್ಶನಕ್ಕಾಗಿ ಸಿದ್ಧತೆ ನಡೆಸುತ್ತಿದ್ದ ಕಾರಣ ಅವರಿಗೆ ಅನಿವಾರ್ಯವಾಗಿ ಕೋರ್ಟ್ ಮುಂದೆ ಹಾಜರಾಗಲು ಸಾಧ್ಯವಾಗಲಿಲ್ಲ.
ಹೀಗಾಗಿ ಮಹಿಳೆ ತನ್ನ ಪರವಾಗಿ ತಂದೆಗೆ ಕೋರ್ಟ್‍ನಲ್ಲಿ ಹಾಜರಾಗಲು ಅಧಿಕಾರ ನೀಡಿದ್ದರು. ಆದರೆ, ಹಿರಿಯ ನ್ಯಾಯಾಧೀಶ ಎಂ.ವೆಂಕಟರಮಣ ಅಂತಿಮ ನಿರ್ಧಾರವೊಂದಕ್ಕೆ ಬರುವ ಮೊದಲು ಪತಿ, ಪತ್ನಿ ಇಬ್ಬರ ಅಭಿಪ್ರಾಯವನ್ನು ನೇರವಾಗಿ ಕೇಳ ಬಯಸಿದ್ದರು.
ಈ ಹಿನ್ನೆಲೆಯಲ್ಲಿ ಅವರು ಲ್ಯಾಪ್‍ಟಾಪ್ ಬಳಸಿಕೊಂಡು ಮಹಿಳೆಯನ್ನು ಸ್ಕೈಪ್ ಮೂಲಕ ವಿಚಾರಣೆ ನಡೆಸಿದ್ದಾರೆ. ಹೈದರಾಬಾದ್ ಹೈಕೋರ್ಟ್ ಇತ್ತೀಚೆಗಷ್ಟೇ ಸ್ಕೈಪ್ ರೆಕಾರ್ಡಿಂಗ್‍ಗೆ ಕಾನೂನು ಮಾನ್ಯತೆ ಇದೆ ಎಂದು ಹೇಳಿದ ಬೆನ್ನಲ್ಲೇ ಈ ರೀತಿಯ ವಿಚಾರಣೆ ನಡೆಸಲಾಗಿದೆ.