ನವದೆಹಲಿ: ಬ್ರಿಟನ್ನಿನ 'ರಿಜಿಸ್ಟಾರ್ ಆಪ್ ಕಂಪನೀಸ್'ನಲ್ಲಿ ತಾವು ಬ್ರಿಟಿಶ್ ನಾಗರಿಕ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಮೂದಿಸಿರುವುದನ್ನು ಸಿಬಿಐ ಕೂಡಲೆ ತನಿಖೆ ನಡೆಸಬೇಕೆಂದು ಆಗ್ರಹಿಸಿ ಸುಪ್ರೀಮ್ ಕೋರ್ಟಿಗೆ ಸಲ್ಲಿಸಿದ್ದ ಸಾರ್ವಜನಿಕ ಅರ್ಜಿಯನ್ನು ತುರ್ತಾಗಿ ಆಲಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
"ಈ ವಿಷಯದಲ್ಲಿ ತುರ್ತೇನು ಇಲ್ಲ" ಎಂದು ಮುಖ್ಯ ನ್ಯಾಯಾಧೀಶ ಎಚ್ ಎಲ್ ದತ್ತು ಒಳಗೊಂಡ ನ್ಯಾಯಪೀಠ ಅರ್ಜಿದಾರ ವಕೀಲ ಮನೋಹರ್ ಲಾಲ್ ಶರ್ಮ ಅವರಿಗೆ ತಿಳಿಸಿದೆ.
ಈ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಿ ವರದಿಯನ್ನು ಕೋರ್ಟ್ ಗೆ ಮಾತ್ರ ಸಲ್ಲಿಸುವುವಂತೆ ಆದೇಶ ನೀಡಲು ಕೋರಿ ಶರ್ಮಾ ಅರ್ಜಿ ಸಲ್ಲಿಸಿದ್ದರು.
ಬ್ರಿಟನ್ ಪೌರತ್ವ ಹೊಂದಿರುವ ರಾಹುಲ್ ಗಾಂಧಿ ಸುಳ್ಳು ಮಾಹಿತಿ ನೀಡಿ ಇಲ್ಲಿ ಸಂಸದರಾಗಿರುವುದು ಚುನಾವಣಾ ಪ್ರಕ್ರಿಯೆಗೆ ಮೋಸ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧ ಮನೋಹರ್ ಆರೋಪಿಸಿದ್ದಾರೆ.
ಯಾವುದೇ ವಿದೇಶಿ ಪೌರತ್ವ ಹೊಂದಿರುವವರು ಭಾರತದಲ್ಲಿ ಸಂಸದರಾಗುವ ಸಾಧ್ಯವಿಲ್ಲ ಎಂದು ಅವರು ದೂರಿದ್ದಾರೆ.
ರಾಹುಲ್ ಗಾಂಧಿ ಬ್ರಿಟಿಶ್ ಪೌರತ್ವ ತೊರೆದು ಭಾರತೀಯ ನಾಗರಿಕರಾಗಿದ್ದು ಯಾವಾಗ ಎಂದು ಕೂಡ ಪ್ರಶ್ನಿಸಿದ್ದಾರೆ.