ಚೆನ್ನೈ: ತಮಿಳುನಾಡಿನಾದ್ಯಂತ ಮಳೆ ಆರ್ಭಟ ಜೋರಾಗಿದ್ದು, ಮಳೆ ಸಂಬಂಧಿತ ಘಟನೆಯಲ್ಲಿ ಸುಮಾರು 184 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಕಳೆದ ಮೂರು ವಾರಗಳಿಂದಲೂ ತಮಿಳುನಾಡಿನಲ್ಲಿ ಮಳೆ ಆರ್ಭಟ ಜೋರಾಗಿದ್ದು, ಇಂದು ಸಹ ತಮಿಳುನಾಡಿನಾದ್ಯಂತ ಮಳೆ ಮುಂದುವರೆದಿದೆ. ಮಳೆ ಸಂಬಂಧಿಸಿದ ಘಟನೆಗಳಲ್ಲಿ ಇದೀಗ ಮತ್ತೆ 7 ಮಂದಿ ಸಾವನ್ನಪ್ಪಿದ್ದು, ಇದರಂತೆ ಮಳೆಯಿಂದಾಗಿ ಸಾವಿನ ಸಂಖ್ಯೆ 184 ಆಗಿದೆ.
ಬಂಗಾಳದಲ್ಲಿ ಆಗ್ನೇಯ ಭಾಗದಲ್ಲಿ ಕಡಿಮೆ ಒತ್ತಡ ಏರ್ಪಟ್ಟಿರುವ ಕಾರಣ ತಮಿಳುನಾಡಿನ ಕರಾವಳಿ ತೀರಾ ಪ್ರದೇಶದಲ್ಲಿ ಶನಿವಾರದವರೆಗೂ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ. ತಮಿಳುನಾಡಿನ ಕರಾವಳಿ ತೀರ ಪ್ರದೇಶಗಳಲ್ಲಿ ಭಾನುವಾರದಿಂದ ಸೋಮವಾರದವರೆಗೂ ಭಾರೀ ಮಳೆಯಾಗುವ ಸಂಭವವಿದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆ ನಿರ್ದೇಶಕ ಎಸ್.ಆರ್.ರಾಮನನ್ ಹೇಳಿದ್ದಾರೆ.
ಮಳೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತ ಅವರು, ನವಂಬರ್ 18 ರಿಂದ 25ರವರೆಗೂ ಸುರಿದ ಭಾರೀ ಮಳೆಗೆ ಇದೀಗ ಮತ್ತೆ 8 ಮಂದಿ ಸಾವನ್ನಪ್ಪಿದ್ದು, ಈವರೆಗೂ 184 ಜನ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ಮೃತರ ಕುಟುಂಬಸ್ಥರಿಗೆ 4 ಲಕ್ಷ ಪರಿಹಾರ ಧನವನ್ನು ನೀಡುವುದಾಗಿ ಘೋಷಿಸಿದ್ದಾರೆ.
ಭಾರೀ ಮಳೆ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈ ಗೊಂಡಿದ್ದು, ಆಸ್ತಿ ಹಾಗೂ ಜೀವನ ಕಳೆದುಕೊಂಡವರಿಗಾಗಿ ಸಹಾಯ ಮಾಡಲು ಈಗಾಗಲೇ ರು.500ಕೋಟಿ ಹಣವನ್ನು ಮೀಸಲಿಡಲಾಗಿದೆ. ಅಲ್ಲದೆ, ಮಳೆಯಿಂದಾಗಿ ಈಗಾಗಲೇ ಜನರು ಸಂಕಷ್ಟದಲ್ಲಿದ್ದು, ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಹೀಗಾಗಿ ಈ ಕುರಿತಂತೆ ರು.2000 ಕೋಟಿ ಹಣವನ್ನು ರಾಜ್ಯಕ್ಕೆ ನೀಡುವಂತೆ ಮನವಿ ಪತ್ರವೊಂದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬರಯಲಾಗಿದೆ ಎಂದು ಹೇಳಿದ್ದಾರೆ.
ನವೆಂಬರ್ 23 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮಿಳುನಾಡಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳಾಗಿರುವ ಜನರ ಪರಿಹಾರಕ್ಕಾಗಿ ರು.939.63 ಕೋಟಿ ಹಣವನ್ನು ತಮಿಳುನಾಡಿಗೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.