ದೇಶ

ಪಾಕಿಸ್ತಾನದ ಪರ ಬೇಹುಗಾರಿಕೆ: ಓರ್ವ ಬಿಎಸ್ಎಫ್ ಸಿಬ್ಬಂದಿ, ಐಎಸ್ಐ ಏಜೆಂಟ್ ಬಂಧನ

Srinivas Rao BV

ನವದೆಹಲಿ: ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಬೇಹುಗಾರಿಕೆ ನಡೆಸಿ ಪಾಕಿಸ್ತಾನಕ್ಕೆ ಮಾಹಿತಿ ರವಾನೆ ಮಾಡುತ್ತಿದ್ದ ಓರ್ವ ಬಿಎಸ್ಎಫ್ ಯೋಧ, ಮತ್ತೋರ್ವ ಶಂಕಿತ ಐಎಸ್ಐ ಏಜೆಂಟ್ ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಓರ್ವನನ್ನು ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯ ಕೈಫತ್-ಉಲ್ಲಾ-ಖಾನ್ ಅಲಿಯಾಸ್ ಮಾಸ್ಟರ್ ರಾಜ(44 ) ಎಂದು ಗುರುತಿಸಲಾಗಿದ್ದರೆ ಮತ್ತೋರ್ವ ಆರೋಪಿಯನ್ನು ಜಮ್ಮು-ಕಾಶ್ಮೀರದ ಬಿಎಸ್ಎಫ್ ನ ಗುಪ್ತಚರ ವಿಭಾಗದ ಮುಖ್ಯ ಪೇದೆ ಅಬ್ದುಲ್ ರಶೀದ್ ಎಂದು ಗುರುತಿಸಲಾಗಿದೆ. ಬಂಧಿತ ಬಿಎಸ್ಎಫ್ ಮುಖ್ಯ ಪೇದೆ ಮನೆಯಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಂಟಿ ಆಯುಕ್ತ ರವೀಂದ್ರ ಯಾದವ್ ಹೇಳಿದ್ದಾರೆ.
ಕೈಫತ್-ಉಲ್ಲಾ ಖಾನ್ ಪಾಕಿಸ್ತಾನದ ಗುಪ್ತಚರ ಇಲಾಖೆ ನಿಯೋಜಿತ ವ್ಯಕ್ತಿ. ಆತನಿಗೆ ಬಿಎಸ್ಎಫ್ ಯೋಧ ರಶೀದ್ ಮುಖ್ಯ ಮಾಹಿತಿದಾರನಾಗಿ ಕೆಲಸ ಮಾಡುತ್ತಿದ್ದ. ಐಎಸ್ಐ ಆಣತಿಯಂತೆ ಇಬ್ಬರೂ ಬೇಹುಗಾರಿಕೆ ನಡೆಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಗಡಿ ಭಾಗದಲ್ಲಿ ಪಾಕಿಸ್ತಾನ ಪ್ರಾಯೋಜಿತ ಬೇಹುಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದು ತಂಡ ರಚಿಸಿದ್ದ ದೆಹಲಿ ಅಪರಾಧ ವಿಭಾಗ ಪೊಲೀಸರು ಕೆಲವು ಶಂಕಿತರ ಮೇಲೆ ನಿಗಾ ಇಟ್ಟಿದ್ದರು. ಐಎಸ್ಐ ಏಜೆಂಟ್ ಖಾನ್ ಭೋಪಾಲ್ ಗೆ ತೆರಳುತ್ತಿರಬೇಕಾದರೆ ದೆಹಲಿ ಪೊಲೀಸರು ಆತನನ್ನು ಬಂಧಿಸಿದ್ದು, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

SCROLL FOR NEXT