ನವದೆಹಲಿ: ಸಹಿಷ್ಣುತೆ-ಅಸಹಿಷ್ಣುತೆ ಚರ್ಚೆ ಸೋಮವಾರ ಸಂಸತ್ತಿನಲ್ಲಿ ಗದ್ದಲವನ್ನುಂಟು ಮಾಡಿದ ಹಿನ್ನೆಲೆಯಲ್ಲಿ ಕಲಾಪವನ್ನು 2 ಗಂಟೆಯವರೆಗೆ ಮುಂದೂಡಲಾಗಿದ್ದು, ಇದೀಗ ಮತ್ತೆ ಕಲಾಪ ಆರಂಭವಾಗಿದೆ.
ಅಸಹಿಷ್ಣುತೆ ಕುರಿತಂತ ಚರ್ಚೆ ಸಂಸತ್ತಿನಲ್ಲಿ ಆರಂಭವಾದ ನಂತರ ಸಿಪಿಎಂ ನಾಯಕ ಮೊಹ್ದ್ ಸಲೀಮ್ ಅವರು ಮಾತನಾಡಿದ್ದರು. ಈ ವೇಳೆ ಗೃಹ ಸಚಿವ ರಾಜನಾಥ ಸಿಂಗ್ ವಿರುದ್ಧ ಆರೋಪ ವ್ಯಕ್ತಪಡಿಸಿದ್ದ ಅವರು, ಸಿಂಗ್ ಅವರು ಖಾಸಗಿ ನಿಯತಕಾಲಿಕೆಯೊಂದರಲ್ಲಿ 800 ವರ್ಷದ ಬಳಿಕ ಮೊದಲ ಬಾರಿಗೆ ಒಬ್ಬ ಹಿಂದೂ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರು ಆಯ್ಕೆಯಾಗಿದ್ದಾರೆಂದು ಹೇಳಿದ್ದಾರೆಂದು ಹೇಳಿದ್ದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ರಾಜನಾಥ ಸಿಂಗ್ ಅವರು ನಾನು ಈ ಬಗ್ಗೆ ಹೇಳಿಕೆ ನೀಡಿಯೇ ಇಲ್ಲ ಮೊಹ್ದ್ ಸಲೀಮ್ ಅವರು ಕೂಡಲೇ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದರು.
ಇದಕ್ಕುತ್ತರಿಸಿದ ಸಲೀಮ್ ರಾಜನಾಥ್ ಸಿಂಗ್ ಅವರು ಈ ರೀತಿಯ ಹೇಳಿಕೆ ನೀಡಿಲ್ಲ ಎಂದಿದ್ದೇ ಆದರೆ, ಪತ್ರಿಕಾ ಕಚೇರಿಗೆ ಕಾನೂನಿನ ಅನ್ವಯದಲ್ಲಿ ನೋಟಿಸ್ ಜಾರಿ ಮಾಡಲಿ ಎಂದು ಹೇಳಿದರು.
ನಂತರ ಮಾತನಾಡಿದ ಸಲೀಮ್ ಅವರು ಭಾರದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದ್ದು, ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ. ಭಾರತದಲ್ಲಿ ಸಹಿಷ್ಣುತೆ ಇದೆ ಎಂದು ಯಾರೊಬ್ಬರು ಹೇಳುತ್ತಿಲ್ಲ. ಈ ರೀತಿಯ ಅಪವಾದಗಳು ದೇಶಕ್ಕೆ ಅಪಮಾನವನ್ನುಂಟು ಮಾಡುತ್ತಿದೆ ಎಂದು ಹೇಳಿದರು.
ಇದಕ್ಕುತ್ತರಿಸಿದ ರಾಜನಾಥ್ ಸಿಂಗ್ ಅವರು, ಅಸಹಿಷ್ಣುತೆ ವಾತಾವರಣ ಸೃಷ್ಟಿಯಾಗುತ್ತಿರುವುದು ರಾಜ್ಯಗಳಲ್ಲಿ. ಇದಕ್ಕೆ ಕೇಂದ್ರ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಹೇಳಿದ್ದಾರೆ.