ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಾಗರಿಕತೆ ವಿವಾದದ ಕುರಿತು ಸಿಬಿಐ ತನಿಖೆ ನಡೆಸುವಂತೆ ಹೂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನೊಳಗೊಂಡ ವಿಭಾಗೀಯ ಪೀಠ, ನ್ಯಾಯಾಧೀಶರೊಬ್ಬರು ಸಲ್ಲಿಸಿದ್ದ ಅರ್ಜಿಯು ನಿಷ್ಪ್ರಯೋಜಕವಾಗಿದ್ದು, ವಿಚಾರಣೆಗೆ ಅರ್ಹವಾಗಿಲ್ಲ ಎಂದು ತಿಳಿಸಿದೆ.
ವಸ್ತುಸ್ಥಿತಿಯನ್ನು ಸರಿಯಾಗಿ ತಿಳಿದುಕೊಳ್ಳದೆ ರಾಹುಲ್ ಗಾಂಧಿಯವರ ವಿರುದ್ಧ ಅರ್ಜಿದಾರರು ಆಧಾರರಹಿತ ಆರೋಪ ಮಾಡಿದ್ದಾರೆ ಎಂದು ಹೇಳಿರುವ ಕೋರ್ಟ್ ಮನವಿಯನ್ನು ಹಿಂತೆಗೆದುಕೊಳ್ಳಲು ತಿರಸ್ಕರಿಸಿದೆ.
ರಾಹುಲ್ ಗಾಂಧಿಯವರು ಚುನಾವಣಾ ನೀತಿಯನ್ನು ಉಲ್ಲಂಘಿಸಿದ್ದರೆ ಅದನ್ನು ಚುನಾವಣಾ ಆಯೋಗ ನೋಡಿಕೊಳ್ಳುತ್ತದೆ ಎಂದು ನ್ಯಾಯಾಲಯ ಛೀಮಾರಿ ಹಾಕಿದೆ.
ಕಂಪೆನಿಯ ಸ್ಥಾಪನೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಮುಂದೆ ರಾಹುಲ್ ಗಾಂಧಿಯವರು ಇಂಗ್ಲೆಂಡ್ ಪ್ರಜೆ ಎಂದು ಹೇಳಿಕೊಂಡಿದ್ದರು ಎಂದು ಇತ್ತೀಚೆಗೆ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಆರೋಪಿಸಿದ್ದರು.
ನನಗೆ ಇತ್ತೀಚೆಗೆ ಸಿಕ್ಕಿರುವ ದಾಖಲೆಗಳಲ್ಲಿ ರಾಹುಲ್ ಗಾಂಧಿಯವರು ಬ್ರಿಟಿಷ್ ಪ್ರಜೆ ಎಂದು ಅವರೇ ಹೇಳಿಕೊಂಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಸುಬ್ರಹ್ಮಣ್ಯ ಸ್ವಾಮಿ ಉತ್ತರಿಸಿದ್ದಾರೆ.
ಈ ಆರೋಪದ ಬಗ್ಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, ಆರೋಪವನ್ನು ತಳ್ಳಿ ಹಾಕಿದ್ದಾರೆ. ತಮ್ಮ ವಿರುದ್ಧ ವಿಚಾರಣೆ ನಡೆಸಿ ತಾವು ಅಪರಾಧಿ ಎಂದು ಸಾಬೀತಾದಲ್ಲಿ ಜೈಲಿಗೆ ಹೋಗಲು ಸಿದ್ಧ ಎಂದು ಪ್ರಧಾನ ಮಂತ್ರಿ ಮೋದಿಯವರಿಗೆ ಸವಾಲು ಹಾಕಿದ್ದರು.