ನವದೆಹಲಿ: ತಾಜ್ ಮಹಲ್ ಪುರಾತನ ಹಿಂದೂ ದೇವಾಲಯವೋ ಅಥವಾ 17 ನೇ ಶತಮಾನದಲ್ಲಿ ನಿರ್ಮಿಸಲಾದ ಸ್ಮಾರಕವೋ ಎಂಬ ಬಗ್ಗೆ ಪ್ರತಿಪಾದನೆಗಳು ಕೇಳಿಬರುತ್ತಿರುವ ಬಗ್ಗೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದೆ.
ಪ್ರೇಮದ ಕುರುಹಾಗಿರುವ ತಾಜ್ ಮಹಲ್ ನ್ನು ಪುರಾತನ ಹಿಂದೂ ದೇವಾಲಯ ಎಂದು ಸಾಮೀತುಪಡಿಸುವುದಕ್ಕೆ ಪ್ರಬಲ ಸಾಕ್ಷಿ ಇಲ್ಲ ಎಂದು ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮ ಲೋಕಸಭೆಗೆ ತಿಳಿಸಿದ್ದಾರೆ. ಇಂದಿನ ತಾಜ್ ಮಹಲ್ ಮೂಲತಃ ಶಿವನ ದೇವಸ್ಥಾನವಾಗಿತ್ತು ಆದ್ದರಿಂದ ಅದು ಹಿಂದೂಗಳ ದೇವಾಲಯ ಎಂದು ಇತ್ತೀಚೆಗಷ್ಟೇ ಆಗ್ರಾದ ಕೆಲವು ನ್ಯಾಯವಾದಿಗಳು ಕೋರ್ಟ್ ಗೆ ಮೊಕದ್ದಮೆ ದಾಖಲಿಸಿದ್ದರು.
ಈ ಬಗ್ಗೆ ಸಂಸತ್ ನಲ್ಲಿ ಮಾತನಾಡಿರುವ ಮಹೇಶ್ ಶರ್ಮ, ತಾಜ್ ಮಹಲ್ ನ್ನು ಹಿಂದೂ ದೇವಾಲಯ ಎಂಬುದಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಬಲ ಸಾಕ್ಷ್ಯ ದೊರೆತಿಲ್ಲ ಎಂದು ಹೇಳಿದ್ದಾರೆ. ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದ ವಕೀಲರು, ತಾಜ್ ಮಹಲ್ ಹಿಂದೂ ದೇವಾಲಯವಾಗಿರುವುದರಿಂದ ಅದರ ಒಡೆತನವನ್ನು ಹಿಂದುಗಳಿಗೆ ವರ್ಗಾಯಿಸಬೇಕು ಹಾಗೂ ಮುಸ್ಲಿಮರಿಗೆ ಅಲ್ಲಿ ಪ್ರಾರ್ಥನೆ ಸಲ್ಲಿಸುವುದಕ್ಕೆ ಅವಕಾಶ ನೀಡಬಾರದು ಎಂದು ವಾದಿಸಿದ್ದರು.
ತಾಜ್ ಮಹಲ್ ಪುರಾತನ ಹಿಂದೂ ದೇವಾಲಯ ಎಂಬ ವಾದವನ್ನು ಈ ಹಿಂದೆ ಭಾರತೀಯ ಪುರಾತತ್ವ ಇಲಾಖೆ ತಳ್ಳಿಹಾಕಿತ್ತು. ತಾಜ್ ಮಹಲ್ ಬಗೆಗಿನ ಪ್ರತಿಪಾದನೆಗಳಿಂದ ಉಂಟಾಗಿರುವ ವಿವಾದ ಪ್ರವಾಸೋದ್ಯಮದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮಹೇಶ್ ಶರ್ಮ ಹೇಳಿದ್ದಾರೆ.