ದೇಶ

ಕಾರ್ಯಕ್ಷಮತೆ ಹೆಚ್ಚಿಸಿ ಇಲ್ಲವೇ ಕಠಿಣ ಕ್ರಮ ಎದುರಿಸಿ: ಅಧಿಕಾರಿಗಳಿಗೆ ಕೇಂದ್ರ ಸಚಿವ ಗಡ್ಕರಿ ಎಚ್ಚರಿಕೆ

Srinivas Rao BV

ನವದೆಹಲಿ:ರಸ್ತೆ ನಿರ್ಮಾಣ ಯೋಜನೆಗಳು ನಿಧಾನಗತಿಯಲ್ಲಿ ಸಾಗುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕಾರ್ಯಕ್ಷಮತೆ ಪ್ರದರ್ಶಿಸದ ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

ವೇಗವಾಗಿ ಯೋಜನೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಇಲ್ಲವೇ ಸ್ವಯಂ ನಿವೃತ್ತಿ ಪಡೆಯಿರಿ ಎಂದು ಗಡ್ಕರಿ ಕಳಪೆ ಕಾರ್ಯನಿರ್ವಹಣೆ ಪ್ರದರ್ಶಿಸುತ್ತಿರುವ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಅಧಿಕಾರಿಗಳ ಕಳಪೆ ಕಾರ್ಯನಿರ್ವಹಣೆ ಭಾರತದ ಅಭಿವೃದ್ಧಿಗೆ ಅಡ್ಡಿಯಾಗಬಾರದು, ಆದ್ದರಿಂದ ಸರಿಯಾಗಿ ಕೆಲಸ ಮಾಡಬೇಕು ಇಲ್ಲವೇ ಸ್ವಯಂ ನಿವೃತ್ತಿ ಪಡೆಯಬೇಕು ಎಂದು ಗಡ್ಕರಿ ತಿಳಿಸಿದ್ದಾರೆ.
ಪ್ರತಿ ನಿತ್ಯ 100 ಕಿ.ಮಿ ರಸ್ತೆ ನಿರ್ಮಾಣ ಗುರಿ ಹೊಂದಿದ್ದು, ರೆಡ್ ಟೇಪ್ ಸಂಸ್ಕೃತಿಯನ್ನು ಕೇಂದ್ರ ಸರ್ಕಾರ ಸಹಿಸುವುದಿಲ್ಲ. ಅಂತಹ ಸಂಸ್ಕೃತಿಯನ್ನು ಪಾಲಿಸುವ ಅಧಿಕಾರಿಗಳನ್ನು ಸಹ ಕೇಂದ್ರ ಸರ್ಕಾರ ಸಹಿಸುವುದಿಲ್ಲ, ರೆಡ್ ಟೇಪ್ ಸಂಸ್ಕೃತಿಯನ್ನು ಅನುಸರಿಸುವ ಅಧಿಕಾರಿಗಳಿಗೆ ದಂಡ ವಿಧಿಸಲಾಗುತ್ತದೆ ಎಂದು ಗಡ್ಕರಿ ಎಚ್ಚರಿಸಿದ್ದಾರೆ.
ಕೆಲಸ ಮಾಡಲು ಇಷ್ಟ ಇಲ್ಲದೇ ಇರುವವರು ದಯಮಾಡಿ ಸ್ವಯಂ ನಿವೃತ್ತಿ ಪಡೆಯಿರಿ, ನಮಗೆ ಸಕಾರಾತ್ಮಕ ಮನೋಭಾವದ ಅಧಿಕಾರಿಗಳು ಬೇಕಾಗಿದ್ದಾರೆ, ಅಧಿಕಾರಿಗಳು ತಮ್ಮ ಮನಸ್ಥಿತಿಯನ್ನು  ಬದಲಾಯಿಸಿಕೊಳ್ಳುವ ಅಗತ್ಯವಿದ್ದು ಇನ್ನು ಮುಂದೆ ಕಾರ್ಯನಿರ್ವಹಣೆ ಗುಣಮಟ್ಟದ ಬಗ್ಗೆ ಆಡಿಟ್ ನಡೆಸಲಾಗುವುದು, ಕಳಪೆ ಕಾರ್ಯನಿರ್ವಗಣೆ ಕಂಡುಬಂದಲ್ಲಿ ಅಧಿಕಾರಿಗೆ ದಂಡ ವಿಧಿಸುವುದಕ್ಕೆ ಕೇಂದ್ರ ಸರ್ಕಾರ ಹಿಂಜರಿಯುವುದಿಲ್ಲ ಎಂದು ಗಡ್ಕರಿ ತಿಳಿಸಿದ್ದಾರೆ.  
ಭಾರತದಲ್ಲಿ ಬಂಡವಾಳ ಹೂಡಲು ಅನೇಕ ರಾಷ್ಟ್ರಗಳು ಸಿದ್ಧವಾಗಿವೆ. ಪ್ರಮುಖವಾಗಿ ಹೆದ್ದಾರಿ ಕ್ಷೇತ್ರದಲ್ಲಿ ಅತಿ ಹೆಚ್ಚು ಬಂಡವಾಳ ಹೂಡಿಕೆಯಾಗಲಿದೆ. 5 ಲಕ್ಷ ಕೋಟಿ ಮೌಲ್ಯದ ಕಾಮಗಾರಿ ಜಾರಿಯಾಗಲಿದ್ದು, ಯೋಜನಾ ವರದಿ ತಯಾರಿ ಹಾಗೂ ಕ್ಲಿಯರೆನ್ಸ್(ಪರವಾನಗಿ) ನೀಡುವ ಪ್ರಕ್ರಿಯೆ ವೇಗವಾಗಿ ನಡೆಯಬೇಕಿದೆ. ಆದರೆ ಅಧಿಕಾರಿಗಳು ನಿರ್ಧಾರ ಶೀಘ್ರವಾಗಿ ನಿರ್ಧಾರ ಕೈಗೊಳ್ಳದೇ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡುತ್ತಿಲ್ಲ ಎಂದು ಗಡ್ಕರಿ ತಿಳಿಸಿದ್ದಾರೆ.

SCROLL FOR NEXT