ದೇಶ

ಗರ್ಭಾ ನೃತ್ಯದಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ನಿಷೇಧ

Rashmi Kasaragodu
ಅಹಮದಾಬಾದ್: ಗುಜರಾತ್‌ನ ಕಚ್‌ನಲ್ಲಿರುವ ಮಾಂಡವಿ ಪ್ರದೇಶದಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ನಡೆಯುವ ಗರ್ಭಾ ನೃತ್ಯದಲ್ಲಿ ಭಾಗವಹಿಸಲು ಮುಸ್ಲಿಮರಿಗೆ ನಿಷೇಧ ಹೇರಲಾಗಿದೆ.
ಇಲ್ಲಿನ ಹಿಂದೂ ಸಂಘಟನ್ ಯುವ ಮೋರ್ಚಾ ಗರ್ಭಾ ನೃತ್ಯ ನಡೆಯುವ ಸ್ಥಳಕ್ಕೆ ಮುಸ್ಲಿಮರು ಬರಕೂಡದು ಎಂದಿದೆ. ಅದೇ ವೇಳೆ ಗರ್ಭಾ ನೃತ್ಯದಲ್ಲಿ ಭಾಗವಹಿಸುವ ಹಿಂದೂಗಳ ಹಣೆಗೆ ತಿಲಕವನ್ನಿಡಲೇಬೇಕು ಮತ್ತು ದೇಹಕ್ಕೆ ಗಂಜಲ ಪ್ರೋಕ್ಷಣೆ ಮಾಡಿಕೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಹೇಳಿರುವುದಾಗಿ ಬಲ್ಲಮೂಲಗಳಿಂದ ತಿಳಿದು ಬಂದಿದೆ.
ಮಾಂಡವಿ ಪ್ರದೇಶದಲ್ಲಿ ಗರ್ಭಾ ನೃತ್ಯ ನಡೆಯುವ ವೇಳೆ ತಮ್ಮ ಸಂಘದವರು ಅಲ್ಲಿ ನಿಗಾ ವಹಿಸುತ್ತಾರೆ ಎಂದು ಹಿಂದೂ ಸಂಘಟನ್ ಯುವ ಮೋರ್ಚಾ ಅಧ್ಯಕ್ಷ ರಘುವೀರ್‌ಸಿಂಗ್  ಜಡೇಜಾ ಹೇಳಿದ್ದಾರೆ.
ಏತನ್ಮಧ್ಯೆ, ಈ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ತಮ್ಮ ಸಮುದಾಯದ ಸದಸ್ಯರು ಸಭೆ ಸೇರುವುದಾಗಿ ಸ್ಥಳೀಯ ಮುಸ್ಲಿಂ ನಾಯಕ ಅಜಂ ಅಂಗಾಡಿಯಾ ಹೇಳಿದ್ದಾರೆ.
ಮುಸ್ಲಿಮರ ಹೊರತಾಗಿ ಹಿಂದೂಗಳು ಕೂಡಾ ರಂಜಾನ್ ವೇಳೆ ಉಪವಾಸ ಮಾಡುತ್ತಾರೆ. ಮುಸ್ಲಿಮರು ಗಣೇಶ ಚತುರ್ಥಿಯಲ್ಲಿ ಪಾಲ್ಗೊಳ್ಳುತ್ತಾರೆ. ಹೀಗಿರುವಾಗ ಗರ್ಭಾ ನೃತ್ಯಕ್ಕೆ ಮುಸ್ಲಿಮರಿಗೆ ನಿಷೇಧ ಹೇರಿರುವುದು ಸರಿಯಲ್ಲ ಎಂದು ಬಿಜೆಪಿ ನಾಯಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನವರಾತ್ರಿ ಹಬ್ಬವೆಂದರೆ ದೇವಿಯನ್ನು ಪೂಜಿಸುವ ಹಬ್ಬವಾಗಿದೆ. ಆದ್ದರಿಂದ ಗರ್ಭಾ ನೃತ್ಯ ಮಾಡುವಲ್ಲಿಗೆ ಗೋಮಾಂಸ ತಿನ್ನುವ ಮುಸ್ಲಿಮರಿಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಕಳೆದ ವರ್ಷ ವಿಹಿಂಪ ನಾಯಕ ಪ್ರವೀಣ್ ತೊಗಾಡಿಯಾ ಹೇಳಿದ್ದರು.
SCROLL FOR NEXT