ಮುಂಬೈ: ಫೇಸ್ ಬುಕ್ ನಲ್ಲಿ ಪರಿಚಯವಾದ ಗೆಳೆಯನೊಬ್ಬನ ಹುಟ್ಟುಹಬ್ಬದ ಪಾರ್ಟಿಗೆಂದು ಹೋದ ಅಪ್ರಾಪ್ತ ಬಾಲಕಿಯೊಬ್ಬಳು ನಂತರ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿರುವ ಘಟನೆಯೊಂದು ಥಾಣೆಯ ಕೊಪ್ರಿ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅತ್ಯಾಚಾರಕ್ಕೊಳಗಾದ ಯುವತಿ ಅಪ್ರಾಪ್ತ ಬಾಲಕಿಯಾಗಿದ್ದು, ಈಕೆಗೆ ಕಳೆದ 2-3 ತಿಂಗಳ ಹಿಂದಷ್ಟೇ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಕೌಸ್ತುಭ್ ಚವನ್ (21) ಎಂಬ ಯುವಕ ಗೆಳಯನಾಗಿದ್ದ. ಸೆಪ್ಟೆಂಬರ್ 30 ರಂದು ತನ್ನ ಹುಟ್ಟುಹಬ್ಬವಿದ್ದು, ಮನೆಯಲ್ಲಿ ಪಾರ್ಟಿಯಿದೆ ಹಾಗಾಗಿ ಪಾರ್ಟಿಗೆ ಬರುವಂತೆ ಚವನ್ ಬಾಲಕಿಯನ್ನು ಆಹ್ವಾನಿದ್ದ. ಗೆಳೆಯನ ಆಹ್ವಾನವನ್ನು ಸ್ವೀಕರಿಸಿದ್ದ ಬಾಲಕಿಯು ಸೆ.30 ರಂದು 12.30 ರ ಸುಮಾರಿಗೆ ಚವನ್ ನ್ನು ಭೇಟಿ ಮಾಡಲು ಹೋಗಿದ್ದಳು.
ಬಾಲಕಿಯನ್ನು ಭೇಟಿಯಾದ ಚವನ್ ಕಾಲು ದಾರಿಯಲ್ಲಿ ಬಾಲಕಿಯನ್ನು ಕೆಲವು ದೂರ ಕರೆದೊಯ್ದಿದ್ದಾನೆ. ನಂತರ ದಾರಿಯಲ್ಲಿ ತನ್ನ ಸಂಬಂಧಿಕನಾದ ದೀಪಾಲಿ ಅಹೈರೆ (25) ಹಾಗೂ ಗೆಳೆಯ ಮಂದರ್ (30) ಎಂಬುವವರನ್ನು ಭೇಟಿ ಮಾಡಿದ್ದಾನೆ. ನಾಲ್ವರೂ ಕೊಪ್ರಿಯ ಚಾವಲ್ ಪ್ರದೇಶಕ್ಕೆ ಹೋಗಿದ್ದಾರೆ. ನಂತರ ಬಾಲಕಿಯ ಮೇಲೆ ಚವನ್ ಹಾಗೂ ಆತನ ಗೆಳಯ ಮಂದರ್ ಇಬ್ಬರೂ ಅತ್ಯಾಚಾರ ಮಾಡಿದ್ದಾರೆ. ಅತ್ಯಾಚಾರ ಮಾಡಿದ ನಂತರ ಆರೋಪಿಗಳು ಬಾಲಕಿಯನ್ನು ಆಕೆಯ ಮನೆಯ ಬಳಿ ಸಂಜೆ 6 ಗಂಟೆ ಸುಮಾರಿಗೆ ಬಿಟ್ಟು ಹೋಗಿದ್ದಾರೆ. ಕೆಲವು ಘಂಟೆಗಳ ಬಳಿಕ ಬಾಲಕಿ ತೀವ್ರ ಹೊಟ್ಟೆ ನೋವು ಎಂದು ತನ್ನ ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದ ಪೋಷಕರಿಗೆ ಆಕೆಯ ಮೇಲೆ ಅತ್ಯಾಚಾರವಾಗಿರುವ ವಿಷಯ ತಿಳಿದಿದೆ.
ಅತ್ಯಾಚಾರ ವಿಷಯ ಪೋಷಕರಲ್ಲಿ ಸಾಕಷ್ಟು ಆತಂಕವನ್ನುಂಟು ಮಾಡಿದೆ. ವಿಷಯ ಇತರರಿಗೆ ತಿಳಿದರೆ ಬಾಲಕಿಯ ಭವಿಷ್ಯ ಹಾಳಾಗುತ್ತದೆಂದು ಭಯಭೀತರಾಗಿ ವಿಷಯವನ್ನು ಮುಚ್ಚಿಟ್ಟಿದ್ದಾರೆ. ಇದೀಗ ಪ್ರಕರಣ ಸಂಬಂಧ ಬಾಲಕಿಯ ಪೋಷಕರು ಥಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಚಂದನ್ ಶೈವ್ ಹೇಳಿದ್ದಾರೆ.
ಪ್ರಸ್ತುತ ಆರೋಪಿಗಳ ವಿರುದ್ಧ ಥಾಣೆ ಪೊಲೀಸರು ಐಪಿಸಿ ಸೆಕ್ಷನ್ 376 ಡಿ (ಅತ್ಯಾಚಾರ, 323 (ಸ್ವಯಂತ ಪ್ರೇರಿತ ಅಪರಾಧ) 363 ಎ (ಅಪಹರಣ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ.