ಖುರ್ಷೀದ್ ಮೊಹಮದ್ ಕಸೌರಿ (ಸಂಗ್ರಹ ಚಿತ್ರ)
ನವದೆಹಲಿ: ಪೂರ್ವಭಾವಿ ಸಿದ್ಧತೆ ಇಲ್ಲದೆ ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆ ಅಸಾಧ್ಯ ಎಂದು ಪಾಕಿಸ್ತಾನ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮೊಹ್ಮದ್ ಕಸೌರಿ ಹೇಳಿದ್ದಾರೆ.
ರಷ್ಯಾದ ಉಫಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ಭೇಟಿ ಮಾಡುವ ಹಿನ್ನಲೆಯಲ್ಲಿ ಇಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಕಸೌರಿ ಅವರು, ಜಟಿಲ ವಿಷಯಗಳಲ್ಲಿ ಪ್ರಧಾನಿಗಳ ನಡುವಿನ ಮಾತುಕತೆಗೂ ಮೊದಲು ಹಿಂಬಾಗಿಲು ಚರ್ಚೆಗಳು ನಡೆಯಬೇಕು. ಕಾಶ್ಮೀರದ ವಿಷಯದಲ್ಲಿ ಈಗ 8 ವರ್ಷಗಳ ಹಿಂದೆ ಹಿಂಬಾಗಿಲ ಚರ್ಚೆಗಳು ನಡೆದಿದ್ದು, ಇಂತಹ ಚರ್ಚೆಯಿಂದ ಪಾಕ್ ಕಡೆ ವ್ಯಕ್ತವಾದ ನಿಲುವಿಗೆ ಅಂದಿನ ಸೇನಾ ಮುಖ್ಯಸ್ಥರು ಮತ್ತು ಐ.ಎಸ್.ಐ. ಮುಖ್ಯಸ್ಥರು ಸಮ್ಮತಿ ಸೂಚಿಸಿದ್ದರು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ ಎಂದರು.
ಟಿ.ವಿ. ಚಾನೆಲ್‌ವೊಂದರ ಸಂದರ್ಶನದಲ್ಲಿ ಕಾಶ್ಮೀರ ವಿಷಯ ಕುರಿತು ಮಾತನಾಡುತ್ತಿದ್ದ ಕಸೌರಿ, ಉಭಯ ದೇಶಗಳ ಶೃಂಗಮಟ್ಟದ ಚರ್ಚೆ ಇರಲಿ, ನಡೆಯುವ ಮೊದಲು ಎರಡೂ ಕಡೆಯಿಂದ ಒಪ್ಪಿತ ವ್ಯಕ್ತಿಗಳು ಹಿಂಬಾಗಿಲ ಚರ್ಚೆ ನಡೆಸಿದರೆ ಕಾಶ್ಮೀರ ವಿಷಯವೂ ಸೇರಿದಂತೆ ನೆನಗುದಿಗೆ ಬಿದ್ದಿರುವ ವಿವಾದಿತ ವಿಷಯಗಳು ಬಗೆಹರಿಯುವ ಸಾಧ್ಯತೆ ಇದೆ ಎಂದೂ ಅವರು ಅಭಿಪ್ರಾಯಪಟ್ಟರು.
ಕಸೌರಿ ಅವರು 'ನೈದರ್ ಎ ಹಾಕ್ ನಾಕ್ ಎ ಡೌ' ಎಂಬ ಪುಸ್ತಕ ಬರೆದಿದ್ದು, ಅದರಲ್ಲಿ ಕಾಶ್ಮೀರ ಕುರಿತಂತೆ ಈ ಮೇಲಿನ ಪ್ರಸ್ತಾಪಗಳು ಇವೆ.