ಪಟನಾ: ಬಿಹಾರ ವಿಧಾನಸಭೆ ಚುನಾವಣೆ ರೂಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಗ್ನಿಪರೀಕ್ಷೆ ಎದುರಾಗಲಿದೆ. ರಾಜ್ಯಕ್ಕೆ 5 ಹಂತಗಳಲ್ಲಿ 49ಸ್ಥಾನಗಳಿಗೆ ಸೋಮವಾರ ಮೊದಲ ಹಂತದ ಮತದಾನ ನಡೆಯಲಿದೆ. ಬಿಜೆಪಿಯ ಸುಧಾರಾಣಾವಾದಿ ಕಾರ್ಯಕ್ರಮಗಳು ಮತ್ತು ಸ್ಥಳೀಯ ನಾಯಕರ ಜಾತ್ಯತೀತ ಒಕ್ಕೂಟದ ನಡುವೆ ಗೆಲವು ಯಾರದೆಂದು ಮತದಾರ ನಿಶ್ಚಯಿಸಲಿದ್ದಾನೆ.
ಚುನಾವಣೆ ಘೋಷಣೆಯಾದಾಗಿನಿಂದ ಪ್ರಧಾನಿ ಮೋದಿ, ಜೆಡಿಯು ನಾಯಕ ನಿತೀಶ್ ಕುಮಾರ್, ಆರ್ ಜೆಡಿ ಮುಖಂಡ ಲಾಲು ನಡುವೆ ತೀವ್ರ ಮಾತಿನ ಸಮರ ತಾರಕಕ್ಕೇರಿತ್ತು. ಚುನಾವಣೆ ದಿನಾಂಕ ಘೋಷಣೆ ಯಾದ ಬಳಿಕ 8 ರ್ಯಾಲಿಗಳನ್ನು ಮೋದಿ ಇಲ್ಲಿ ನಡೆಸಿ ನಿತೀಶ್ ಆಡಳಿತದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದರು. ನಿತೀಶ್ ಮತ್ತು ಲಾಲು ಕೂಡ ಪ್ರತಿದಾಳಿಯಲ್ಲಿ ಹಿಂದುಳಿದಿರಲಿಲ್ಲ. ಗೋಮಾಂಸ ಮುಂತಾದ ವಿಚಾರಗಳು ಚುನಾವಣಾ ಸಮರಕ್ಕೆ ಸಾಕಷ್ಟು ಕಾವೇರಿಸಿದ್ದವು. ಇದೆಲ್ಲದರ ಫಲಿತಾಂಶ ಇಂದಿನ ಮತದಾನದಲ್ಲಿ ಕಾಣಲಿದೆ. ಮೋದಿಯವರಿಗೆ ಈ ಚುನಾವಣೆಯ ಗೆಲುವು ಮುಖ್ಯವಾಗಿದೆ. ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತದ ಕೊರತೆಯಿದ್ದು, ಬಿಹಾರದ ಗೆಲುವು ಅದನ್ನು ತುಂಬಿಕೊಳ್ಳಲು ನೆರವಾಗಲಿದೆ. ಎನ್‍ಡಿಎ ಸರ್ಕಾರದ ಮಹತ್ವದ ಸುಧಾರಣಾ ಕ್ರಮವಾದ ವಿವಾದಿತ ಸರಕು ಮತ್ತು ಸೇವಾ ತೆರಿಗೆ ವಿಧೇಯಕ ವನ್ನು ರಾಜ್ಯಸಭೆಯಲ್ಲಿ ಮಂಜೂರು ಮಾಡಿ ಸಿಕೊಳ್ಳಲು ಈ ಬಹುಮತ ಅಗತ್ಯ . ಮೋದಿಯವರ ಸುಧಾರಣಾ ಕ್ರಮಗಳ ಕುರಿತು ಜನತೆಯ ಅಭಿಪ್ರಾಯ
ತಿಳಿದುಕೊಳ್ಳುವಲ್ಲೂ ಈ ಚುನಾವಣೆ ದಿಕ್ಸೂಚಿಯಾಗಲಿದೆ. ಈಗಾಗಲೇ ದೆಹಲಿ ಚುನಾವಣೆಯಲ್ಲಿ ಹೊಡೆತ ತಿಂದಿರುವ ಬಿಜೆಪಿ ಬಿಹಾರದಲ್ಲೇನಾದರೂ ಸೋಲು ಕಂಡರೆ ಅದನ್ನು ಜೀರ್ಣಿಸಿಕೊಳ್ಳಲುಕಷ್ಟವಾಗಲಿದೆ.
ಟೈಮ್ಸ್ ಸ್ಕ್ವೇರ್‍ನಲ್ಲಿ ಲಿಟ್ಟಿಪೆ ಚರ್ಚಾ: ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಮೆರಿಕದ ಟೈಮ್ಸ್ ಸ್ಕ್ವೇರ್‍ನಲ್ಲಿ ಸೇರಿದ ಎನ್‍ಆರ್‍ಐಗಳುಚರ್ಚೆ ನಡೆಸಿದ್ದಾರೆ. ಆದರೆ ಇದು ಚಾಯ್ ಪೆ ಚರ್ಚಾ ಅಲ್ಲ. `ಲಿಟ್ಟಿ ಪೆ ಚರ್ಚಾ'(ಲಿಟ್ಟಿ ಬಿಹಾರದ ಹೆಸರಾಂತ ಖಾದ್ಯ). ಸುಮಾರು 200ಕ್ಕೂ ಹೆಚ್ಚು ಮಂದಿ ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯದ ಯುವ ಮತದಾ ರರು ತಮ್ಮ ಹಕ್ಕು ಚಲಾಯಿಸಬೇಕೆಂದು ಈ ಮೂಲಕ ಒತ್ತಾಯಿಸಲಾಯಿತು.
ರ್ಯಾಲಿ ರದ್ದು ಅಸಾಧ್ಯ: ಪ್ರಧಾನಿ ಮೋದಿ ಅವರು ಸೋಮವಾರ ಬಭುವಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮೊದಲ ಹಂತದ ಮತದಾನ ನಡೆಯಲಿರುವ
ಪ್ರದೇಶಗಳಿಗೆ ಸಮೀಪದಲ್ಲಿ ಮೋದಿ ನಡೆಸುತ್ತಿರುವ ಪ್ರಚಾರವನ್ನು ನಿಷೇಧಿಸಬೇಕೆಂದು ಕಾಂಗ್ರೆಸ್ ಜೆಡಿಯು ಮೈತ್ರಿಕೂಟ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ. ಆದರೆ
ಅಂಥ ಯಾವುದೇ ನಿಷೇಧ ಹೇರಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics