ದೇಶ

ಪ್ರಶಸ್ತಿ ಹಿಂದಿರುಗಿಸಿದರು ಹದಿನಾಲ್ಕು ಲೇಖಕರು

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯು ಸಾಹಿತ್ಯಿಕ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ದಿನ ಕಳೆದಂತೆ ತಮ್ಮ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ವಾಪಸ್ ನೀಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಸೋಮವಾರ ಮತ್ತೆ 14 ಮಂದಿ ಲೇಖಕರು, ಸಾಹಿತಿಗಳು ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿದ್ದಾರೆ. ಈ ಮೂಲಕ ದೇಶದಲ್ಲಿ ಸಾತ್ವಿಕ ಪ್ರತಿಭಟನೆಯ ರೂಪದಲ್ಲಿ ಪ್ರಶಸ್ತಿಗಳನ್ನು ವಾಪಸ್ ನೀಡಿದವರ ಒಟ್ಟು ಸಂಖ್ಯೆ 33ಕ್ಕೇರಿದಂತಾಗಿದೆ. ಇದೇ ವೇಳೆ, ಮಹತ್ವದ ಬೆಳವಣಿಗೆಯೊಂದರಲ್ಲಿ ಬೂಕರ್ ಪ್ರಶಸ್ತಿ ವಿಜೇತ ಲೇಖಕ ಸಲ್ಮಾನ್ ರಶ್ದಿ ಅವರೂ ಲೇಖಕರ ಪ್ರತಿಭಟನೆಗೆ ಸಾಥ್ ನೀಡಿದ್ದಾರೆ. ಪ್ರಶಸ್ತಿ ವಾಪಸ್ ನೀಡುತ್ತಿರುವ ಸಾಹಿತಿಗಳು, ಲೇಖಕರನ್ನು ನಾನು ಬೆಂಬಲಿಸುತ್ತೇನೆ ಎಂದು ಅವರು ಘೋಷಿಸಿದ್ದಾರೆ.

ಸಾಹಿತಿಗಳ ಆಕ್ರೋಶದ ಬೆನ್ನಲ್ಲೇ ಎಚ್ಚೆತ್ತಿರುವ ಸಾಹಿತ್ಯ ಅಕಾಡೆಮಿ ಅ.23ರಂದು ತನ್ನ ಕಾರ್ಯಕಾರಿ ಮಂಡಳಿಯ ಸಭೆ ಕರೆದಿದೆ. ಸಂಸ್ಥೆಯು ಜಾತ್ಯತೀಯ ಮೌಲ್ಯಗಳನ್ನು ರಕ್ಷಿಸುವಲ್ಲಿ ಬದಟಛಿವಾಗಿದೆ ಎಂದು ಅಧ್ ಅಧ್ಯಕ್ಷ ವಿಶ್ವನಾಥ್ ಪ್ರಸಾದ್ ತಿವಾರಿ ಹೇಳಿದ್ದಾರೆ. ಎಂ ಎಂ ಕಲಬುರ್ಗಿ, ದಾಭೋಲ್ಕರ್, ಪಾನ್ಸರೆ ಹತ್ಯೆ, ದಾದ್ರಿ ಘಟನೆ ಖಂಡಿಸಿ ಕಳೆದ ಕೆಲ ದಿನಗಳಿಂದೀಚೆಗೆ ಹಲವಾರು ಲೇಖಕರು ತಮ್ಮ ಪ್ರಶಸ್ತಿಗಳನ್ನು ವಾಪಸ್ ನೀಡಿದ್ದಾರೆ.

ಸೋಮವಾರ ಕರ್ನಾಟಕದ ರೆಹಮತ್ ತರೀಕೆರೆ, ಮುದ್ದು ತೀರ್ಥಹಳ್ಳಿ, ಶ್ರೀನಾಥ್ ಡಿ.ಎನ್, ಕಾಶ್ಮೀರಿ ಲೇಖಕರಾದ ಗುಲಾಂ ನಬಿ ಖಯಾಲ್, ಉರ್ದು ಕಾದಂಬರಿಗಾರ ರೆಹಮಾನ್ ಅಬ್ಬಾಸ್, ಹಿಂದಿ ಲೇಖಕರಾ ದ ಮಂಗಲೇಶ್ ದಬ್ರಾಲ್, ರಾಜೇಶ್ ಜೋಷಿ, ಪಂಜಾಬಿ ಲೇಖಕ ವರ್ಯಾಂ ಸಂಧು, ಕವಿ ಸುರ್ಜಿತ್ ಪಾಟರ್, ಕಾದಂಬರಿಕಾರ ಬಲದೇವ್ ಸಿಂಗ್ ಸಡಕ್ ನಾಮಾ, ಕವಿಗಳಾದ ಜಸ್ವೀಂದರ್, ದರ್ಶನ್ ಬಟ್ಟರ್, ಗುಜರಾತ್‍ನ ಲೇಖಕ ಅನಿಲ್ ಜೋಷಿ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿದ್ದಾರೆ. ದೆಹಲಿಯ ರಂಗ ಕಲಾವಿದೆ ಮಾಯಾ ಕೃಷ್ಣರಾವ್ ಅವರು ತಮ್ಮ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ವಾಪಸ್ ಮಾಡಿದ್ದಾರೆ.

SCROLL FOR NEXT