ನವದೆಹಲಿ: ಹಣ ದುರುಪಯೋಗ ಪ್ರಕರಣದಲ್ಲಿ ನಾಗರಿಕ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡಗೆ ನೀಡಿರುವ ಮಧ್ಯಂತರ ಜಾಮೀನನ್ನು ವಿಸ್ತರಿಸಿರುವ ಸುಪ್ರೀಂಕೋರ್ಟ್, ಅವರನ್ನು ಮತ್ತು ಅವರ ಪತಿಯನ್ನು ಡಿಸೆಂಬರ್ 8 ರವರೆಗೆ ಬಂಧಿಸದಂತೆ ಆದೇಶಿಸಿದೆ. ನ್ಯಾಯಮೂರ್ತಿ ಎ.ಆರ್.ಸಾವೆ ಅವರನ್ನೊಳಗೊಂಡ ಮೂವರು ನ್ಯಾಯಾಧೀಶರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ.
ನಿರೀಕ್ಷಣಾ ಜಾಮೀನು ನೀಡಲು ಗುಜರಾತ್ ಹೈಕೋರ್ಟ್ ಒಪ್ಪದಿದ್ದಾಗ ತೀಸ್ತಾ ಸೆಟಲ್ವಾಡ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ನಿರೀಕ್ಷಣಾ ಜಾಮೀನು ನೀಡುವಾಗ ಪರಿಸ್ಥಿತಿಗೆ ಬದ್ಧರಾಗಿರುವಂತೆ ಸುಪ್ರೀಂ ಕೋರ್ಟ್ ತೀಸ್ತಾ ಮತ್ತು ಅವರ ಪತಿಗೆ ತಿಳಿಸಿದೆ. ಆದರೆ ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ-2010ರ ಕೇಸಿನಡಿ ನೀಡಲಾಗಿರುವ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸುವಂತೆ ಸಿಬಿಐ ಮಾಡಿದ ಮನವಿ ಬಗ್ಗೆ ತೀಸ್ತಾ ಸೆಟಲ್ವಾಡ ಮತ್ತು ಅವರ ಪತಿಯ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್ ಕೇಳಿದೆ. ಇದಕ್ಕಾಗಿ ನೊಟೀಸು ಜಾರಿ ಮಾಡಿದ್ದು, ಇನ್ನು ನಾಲ್ಕು ವಾರಗಳೊಳಗೆ ಉತ್ತರ ನೀಡುವಂತೆ ಸೂಚಿಸಿದೆ. ಈ ಸಂಬಂಧ ಅರ್ಜಿ ವಿಚಾರಣೆ ಡಿಸೆಂಬರ್ ಒಂದರಂದು ನಡೆಯಲಿದೆ.