ಇಸ್ಲಾಮಾಬಾದ್/ನವದೆಹಲಿ: 13 ವರ್ಷಗಳ ಹಿಂದೆ ಪಾಕಿಸ್ತಾನ ಪ್ರಾಂತ್ಯವನ್ನು ಆಕಸ್ಮಿಕವಾಗಿ ತಪ್ಪಾಗಿ ಪ್ರವೇಶಿಸಿದ್ದ ಭಾರತೀಯ ಯುವತಿ ಗೀತಾಳ ಪೋಷಕರನ್ನು ಭಾರತ ಸರ್ಕಾರ ಪತ್ತೆಹಚ್ಚಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಕಿವುಡಿ ಮತ್ತು ಮೂಗಿಯಾಗಿರುವ ಗೀತಾಳ ಪೋಷಕರು ಬಿಹಾರದಲ್ಲಿದ್ದಾರೆ. ಅವಳು ಸದ್ಯದಲ್ಲಿಯೇ ಭಾರತಕ್ಕೆ ಹಿಂತಿರುಗಲಿದ್ದಾಳೆ. ಅವಳನ್ನು ಡಿಎನ್ ಎ ಪರೀಕ್ಷೆಗೆ ಒಳಪಡಿಸಿ ಪೋಷಕರಿಗೆ ಒಪ್ಪಿಸಲಾಗುವುದು ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಲಾಭರಹಿತ ಸಾಮಾಜಿಕ ಕಾರ್ಯ ಸಂಸ್ಥೆಯಾದ ಈದಿಯ ವಕ್ತಾರ ಅನ್ವರ್ ಕಜ್ಮಿ ಮಾಧ್ಯಮದೊಂದಿಗೆ ಮಾತನಾಡಿ, ಇಸ್ಲಾಮಾಬಾದ್ ನಲ್ಲಿರುವ ಭಾರತದ ಉನ್ನತ ಆಯೋಗದ ಮೂಲಕ ಗೀತಾಳ ಕುಟುಂಬದವರ ಫೋಟೋಗಳನ್ನು ಕಳುಹಿಸಿಕೊಡಲಾಯಿತು. ಫೋಟೋ ನೋಡಿದ ತಕ್ಷಣ ಗೀತಾ ತನ್ನ ಸಹೋದರ-ಸಹೋದರಿಯರನ್ನು ಗುರುತು ಹಿಡಿದಿದ್ದಾಳೆ. ಅವಳ ಕುಟುಂಬದವರು ಬಿಹಾರದಲ್ಲಿ ನೆಲೆಸಿದ್ದಾರೆ ಎಂದು ತಿಳಿಸಿದ್ದಾರೆ.
ಬಾಲಿವುಡ್ ನಲ್ಲಿ ಇತ್ತೀಚೆಗೆ ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯ್ ಜಾನ್ ಚಿತ್ರದ ಕಥೆಗೂ ಗೀತಾಳ ನಿಜ ಜೀವನಕ್ಕೂ ಹೋಲಿಕೆಯಿರುವುದರಿಂದ ಚಿತ್ರ ಬಿಡುಗಡೆಯಾದ ಬಳಿಕ ಆಕೆ ಜನಪ್ರಿಯಳಾದಳು.
ಗೀತಾಳಿಗೆ ಈಗ 21 ವರ್ಷ. 13 ವರ್ಷಗಳ ಹಿಂದೆ ದಾರಿತಪ್ಪಿ ವಾಘಾ ಗಡಿ ದಾಟಿ ಹೋಗಿ ಲಾಹೋರ್ ನಲ್ಲಿ ಸಮ್ಜೌತ ಎಕ್ಸ್ ಪ್ರೆಸ್ ನಲ್ಲಿ ಒಬ್ಬಳೇ ಕುಳಿತಿದ್ದ ಗೀತಾಳನ್ನು ಪಾಕಿಸ್ತಾನಿ ಸೇನೆ ಪತ್ತೆಹಚ್ಚಿ ಈದಿ ಫೌಂಡೇಷನ್ ಗೆ ಕಳುಹಿಸಿತ್ತು. ಈ ಸಂಸ್ಥೆಯ ಆಶ್ರಯದಲ್ಲಿಯೇ ಗೀತಾ ಇಷ್ಟು ವರ್ಷಗಳ ಕಾಲ ಇದ್ದಳು.