ಅಹಮದಾಬಾದ್/ರಾಜ್ ಕೋಟಾ: ಗುಜರಾತಿನಲ್ಲಿ ನಡೆಯುತ್ತಿರುವ ರಾಜಕೀಯ ಸಂಘರ್ಷ ಈಗ ಕ್ರಿಕೆಟ್ ಪಿಚ್ ಗೂ ಕಾಲಿರಿಸುತ್ತಿದೆ. ಎಂಎಸ್ ಧೋನಿ ಅಂಡ್ ಟೀಂಗೆ ಗುಜರಾತಿನ ಪ್ರತಿಭಟನಾಕಾರ ಹಾರ್ದಿಕ್ ಪಟೇಲ್ ಭೀತಿ ಎದುರಾಗಿದೆ. ಪ್ರತಿಭಟನೆಯ ಭೀತಿಯಲ್ಲೇ ಭಾನುವಾರದ ಪಂದ್ಯ ಆಯೋಜನೆಗೊಂಡಿದೆ.
ಪಾಟೀದಾರ್ ಸಂಘಟನೆಯ ಮುಖಂಡ ಹಾರ್ದಿಕ್ ಪಟೇಲ್ ಅವರು ಅಕ್ಟೋಬರ್ 18ರಂದು ನಡೆಯಲಿರುವ ಕ್ರಿಕೆಟ್ ಪಂದ್ಯಕ್ಕೆ ಅಡ್ಡಿಪಡಿಸಲು ಮುಂದಾಗಿದ್ದಾರೆ. ಹಾರ್ದಿಕ್ ಅವರ ಟಾರ್ಗೆಟ್ ಆನಂದಿಬೇನ್ ಅವರ ಬಿಜೆಪಿ ಸರ್ಕಾರವೇ ಆಗಿದ್ದರೂ ಪ್ರತಿಭಟನೆಯ ಬಿಸಿಯನ್ನು ಕ್ರಿಕೆಟರ್ಸ್ ಸಹಿಸಿಕೊಳ್ಳಬೇಕಾಗುತ್ತದೆ. ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ ನಡೆಯುತ್ತಿರುವ ಗಾಂಧಿ-ಮಂಡೇಲಾ ಅಂತಾರಾಷ್ಟ್ರೀಯ ಏಕ ದಿನ ಪಂದ್ಯಕ್ಕೆ ತಡೆಯೊಡ್ಡಲು ಹಾರ್ದಿಕ್ ಪಟೇಲ್ ಮುಂದಾಗಿದ್ದಾರೆ.
ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (ಎಸ್ ಸಿಎ) ಈಗಾಗಲೇ ಸಾಕಷ್ಟು ಭದ್ರತಾ ಕ್ರಮಗಳನ್ನು ಅನುಸರಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲಾಗಿದೆ, ಕ್ರೀಡಾಂಗಣದ ಸುತ್ತಲೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈಗಾಗಲೇ ಎರಡು ತಂಡಗಳ ಆಟಗಾರರು ಅಹಮದಾಬಾದ್ ಗೆ ಆಗಮಿಸಿದ್ದು, ನಾಳೆ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಲಿದ್ದಾರೆ.