ನವದೆಹಲಿ: ಮಾಹಿತಿ ಪಡೆಯುವುದಕ್ಕಷ್ಟೇ ಅಲ್ಲ ಮಾಹಿತಿ ಹಕ್ಕು ಎಂದು ಹೇಳುವುದು, ಪ್ರಶ್ನೆ ಮಾಡುವ ಹಕ್ಕಿಗೂ ಆರ್ ಟಿಐ ಎಂದು ಕರೆಯುತ್ತಾರೆ. ಸರ್ಕಾರವನ್ನು ಪ್ರಶ್ನಿಸುವ ಹಕ್ಕು ಜನರಿಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ.
ದೆಹಲಿಯ ವಿಜ್ಞಾನಭವನದಲ್ಲಿ ನಡೆಯುತ್ತಿರುವ ವಾರ್ಷಿಕ ಆರ್ಟಿಐ ಸಮ್ಮೇಳನದಲ್ಲಿ ಮಾತನಾಡಿರುವ ಅವರು, ಜನರು ಸರ್ಕಾರವನ್ನು ಪ್ರಶ್ನಿಸುವ ಹಕ್ಕನ್ನು ಹೊಂದಿದ್ದಾರೆ. ಪ್ರಶ್ನೆ ಮಾಡುವುದೂ ಕೂಡ ಪ್ರಜಾಪ್ರಭುತ್ವದ ಅಭಿವೃದ್ಧಿಗೆ ಅಡಿಪಾಯವಿದ್ದಂತೆ. ಈ ಅಡಿಪಾಯ ಪ್ರಜಾಪ್ರಭುತ್ವದ ನಂಬಿಕೆಯನ್ನು ಹೆಚ್ಚಿಸುತ್ತದೆ.
ಸರ್ಕಾರ ವಿಷಯಗಳು, ಅಭಿವೃದ್ಧಿ ಕಾರ್ಯಗಳು ಅಂತರ್ಜಾಲಕ್ಕೆ ಕಾಲಿಟ್ಟರೆ, ಪಾರದರ್ಶಕತೆ ಎಂಬುದು ತನ್ನಷ್ಟಕ್ಕೆ ತಾನೇ ಹೆಚ್ಚಾಗುತ್ತದೆ. ಇದರಿಂದ ಜನರ ನಂಬಿಕೆಯೂ ಹೆಚ್ಚುತ್ತದೆ. ಪ್ರಸ್ತುತವಿರುವ ಯುಗದಲ್ಲಿ ಸರ್ಕಾರ ರಹಸ್ಯದಂತೆ ಎಲ್ಲವನ್ನೂ ಮುಚ್ಚಿಡಬಾರದು. ಸರ್ಕಾರ ಜನರೊಂದಿಗೆ ಎಷ್ಟು ಮುಕ್ತವಾಗಿರುತ್ತದೆಯೋ ಅದು ಜನರಿಗೆ ಹೆಚ್ಚು ಸಹಾಯವಾಗಲಿದೆ ಎಂದು ಹೇಳಿದ್ದಾರೆ.
ಮೋದಿ ಸರ್ಕಾರ ವಾರ್ಷಿಕ ಆರ್ ಟಿಐ ಸಮ್ಮೇಳನ ಇದೀಗ ವಿವಾದಗಳ ಸುಳಿಗೆ ಸಿಲುಕಿದ್ದು, ಭದ್ರತಾ ನೆಪವೊಡ್ಡಿ ಸಮ್ಮೇಳನಕ್ಕೆ ಬೆರಳೆಣಿಕೆಯಷ್ಟು ಮಂದಿಗೆ ಆಹ್ವಾನ ನೀಡಿರುವುದು ವಿವಾದವೊಂದಕ್ಕೆ ಕಾರಣವಾಗಿದೆ. ಆರ್ ಟಿಐನ ಈ ಸಮ್ಮೇಳನಕ್ಕೆ ಲೋಕೇಶ್ ಬಾತ್ರಾ, ವೆಂಕಟೇಶ್ ನಾಯಕ್, ಅಂಜಲಿ ಭಾರದ್ವಾಜ್, ನಿಖಿಲ್ ಡೇ, ಅರುಣಾ ರಾಯ್ ಸೇರಿದಂತೆ 7 ಮಂದಿ ಆಹ್ವಾನಿತರು ಭಾಗವಹಿಸುವುದಿಲ್ಲ ಎಂದು ನಿನ್ನೆಯಷ್ಟೇ ಹೇಳಿದ್ದರು. ಅಲ್ಲದೆ, ಇಷ್ಟು ವರ್ಷಗಳಲ್ಲಿಲ್ಲದ ಪರಿಶೀಲನೆ ಈಗೇಕೆ ನಡೆಯುತ್ತಿದೆ? ಇಂಥ ಕ್ರಮದ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದರು.
ಪಾರದರ್ಶಕ ಕಾನೂನು `ಮಾಹಿತಿ ಹಕ್ಕು ಕಾಯ್ದೆ' ಜಾರಿಗೆ ಬಂದು ಇದೀಗ 10 ವರ್ಷ ತುಂಬಿದೆ. ಹೀಗಾಗಿ ದೆಹಲಿಯ ವಿಜ್ಞಾನ ಭವನದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಪ್ರತೀ ವರ್ಷ ನಡೆಯುವ ಆರ್ ಟಿಐ ಸಮ್ಮೇಳನದಲ್ಲಿ ಎಲ್ಲಾ ಆರ್ ಟಿಐ ಹೋರಾಟಗಾರರೂ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರೂ. ಆದರೆ, ಈ ಬಾರಿಯ ಸಮ್ಮೇಳನದಲ್ಲಿ ಭದ್ರತಾ ನೆಪವೊಡ್ಡಿರುವ ಮೋದಿ ಸರ್ಕಾರ ಕೇವಲ 10 ಮಂದಿಗಷ್ಟೇ ಆಹ್ನಾನ ನೀಡಿತ್ತು. ಇದರಿಂದಾಗಿ ಬೇಸತ್ತಿದ್ದ ಆಹ್ವಾನಿತರು ಹಾಗೂ ಹೋರಾಟಗಾರರು ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದರು.