ಫರೀದಾಬಾದ್: ಹರಿಯಾಣದಲ್ಲಿ ದಲಿತರ ಗುಡಿಸಲಿಗೆ ಬೆಂಕಿ ಹಚ್ಚಿ, ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ ಪ್ರಕರಣ ಸಂಬಂಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಫರೀದಾಬಾದ್‌ನಲ್ಲಿ ಮಕ್ಕಳನ್ನು ಕಳೆದುಕೊಂಡ ದಲಿತ ಕುಟುಂಬವನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಫೋಟೋಗಾಗಿ ಈ ರೀತಿ ಭೇಟಿ ನೀಡುತ್ತಿದ್ದೇನೆ ಎಂದು ಟೀಕಿಸುತ್ತಿದ್ದಾರೆ. ಆದರೆ ಯಾರೂ ಏನೇ ಅಂದರೂ ನಾನು ಪದೆಪದೇ ಬರುತ್ತೇನೆ. ಫೋಟೋಗಾಗಿ ರಾಜಕೀಯ ಮಾಡಬೇಕಾದ ಅಗತ್ಯ ಇಲ್ಲ ಎಂದಿದ್ದಾರೆ.
ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿದ್ರೆ ಅದು ರಾಜಕಾರಣವೇ? ಫೋಟೋಗಾಗಿ ಭೇಟಿ ಎಂದು ಟೀಕಿಸುವುದು ಸರಿಯೇ? ಎಂದು ಪ್ರಶ್ನಿಸಿದ ರಾಹುಲ್, ಇದು ನನಗಾದ ಅಪಮಾನವಲ್ಲ, ಜನರಿಗಾದ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಬ್ಬರು ದಲಿತ ಮಕ್ಕಳ ಹತ್ಯೆ ಸಂಬಂಧ ಹರಿಯಾಣ ಸರ್ಕಾರ ಕೈಗೊಂಡ ಕ್ರಮ ಏನು? ಘಟನೆ ನಡೆದು ಎರಡು ದಿನವಾದರೂ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ಸ್ಥಳಕ್ಕೆ ಬಂದಿಲ್ಲ. ಅವರೂ ಪ್ರಧಾನಿ ಮೋದಿಯಂತೆಯೇ ವರ್ತಿಸುತ್ತಿದ್ದಾರೆ ಟೀಕಿಸಿದರು.
ಬಿಜೆಪಿ ಸರ್ಕಾರದಲ್ಲಿ ದುರ್ಬಲರಿಗೆ ಬದುಕುವ ಹಕ್ಕಿಲ್ಲವೇ? ಎಂದು ಹರಿಯಾಣ ಸಿಎಂ ಖಟ್ಟರ್‌ಗೆ ರಾಹುಲ್ ಗಾಂಧಿ ಪ್ರಶ್ನಿಸಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಕಿಡಿಕಾರಿದ ರಾಹುಲ್ ಗಾಂಧಿ, ದುರ್ಬಲರ ಕಷ್ಟಗಳನ್ನು ಕೇಳಲು ಪ್ರಧಾನಿಗೆ ಸಮಯವಿಲ್ಲ. ಅವರು ಕೇವಲ ಮೇಲ್ವರ್ಗದವರ ಬಳಿ ಹೋಗುತ್ತಾರೆ. ಆದರೆ ಶೋಷಣೆ ಒಳಗಾದ ದಲಿತ ಕುಟುಂಬದ ತಪ್ಪಾದರೂ ಏನು? ಎಂದು ರಾಹುಲ್ ಪ್ರಶ್ನಿಸಿದರು.