ನವದೆಹಲಿ: ಗೋ ಹತ್ಯೆ ನಿಷೇಧದ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಕೀನ್ಯಾ ದಂತಹ ಆಫ್ರಿಕಾ ರಾಷ್ಟ್ರಗಳಲ್ಲಿಯೂ ಗೋ ಹತ್ಯೆ ನಿಷೇಧವಿದೆ ಎಂದು ಹೇಳಿದ್ದಾರೆ.
ನಾಗ್ಪುರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕೀನ್ಯಾದಲ್ಲಿ ಜನರು ಹಸುವಿನ ರಕ್ತ ಕುಡಿಯುತ್ತಾರೆ. ಆದರೆ ಅವರು ಗೋವುಗಳನ್ನು ಕೊಲ್ಲುವುದಿಲ್ಲ. ಗೋವನ್ನು ಸಾಯಿಸದೆ ರಕ್ತವನ್ನು ತೆಗೆಯುವ ಕಲೆ ಅಲ್ಲಿನ ಜನರಿಗೆ ಗೊತ್ತು, ಅಲ್ಲಿ ಗೋ ಹತ್ಯೆ ನಿಷೇಧವಿದೆ ಎಂದು ತಿಳಿಸಿದ್ದಾರೆ.
ಇವರ ಹೇಳಿಕೆಗೂ ಮುನ್ನ ಆರ್ ಎಸ್ ಎಸ್ ತನ್ನ ಮುಖವಾಣಿಯಾದ ಪಂಚಜನ್ಯದಲ್ಲಿ ಬರೆದ ಮುಖಪುಟ ಲೇಖನದಲ್ಲಿ ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋ ಮಾಂಸ ತಿಂದ ವದಂತಿ ಮೇಲೆ ಮೊಹಮ್ಮದ್ ಇಕ್ಲಾಕ್ ಎಂಬ ಮುಸಲ್ಮಾನ ವ್ಯಕ್ತಿಯನ್ನು ಕೊಂದ ಬಗ್ಗೆ ಬರೆದಿದ್ದು, ಇದು ಕಾರಣವಿಲ್ಲದೆ ನಡೆದ ಘಟನೆಯಾಗಿರಲಿಕ್ಕಿಲ್ಲ. ಹಿಂದೂ ಧರ್ಮದ ವೇದಗಳಲ್ಲಿ ಗೋ ಹತ್ಯೆ ಮಾಡಿದವರನ್ನು ಕೊಲ್ಲಬೇಕು ಎಂದು ಸಾರಲಾಗಿದೆ. ಹಾಗಾಗಿ ಆತನನ್ನು ಕೊಂದಿರುವುದು ಸರಿ ಎಂದು ಪ್ರಕಟಿಸಲಾಗಿದೆ.
ಯಾರಾದರೂ ಗೋವನ್ನು ಕೊಂದರೆ ಅವರನ್ನು ಸುಮ್ಮನೆ ಬಿಡಬೇಡಿ, ಸಾಯಿಸಿ. ಹಿಂದೂ ಸಮಾಜದಲ್ಲಿ ಗೋ ಹತ್ಯೆಯೆಂಬುದು ಒಂದು ದೊಡ್ಡ ಮತ್ತು ಸೂಕ್ಷ್ಮ ವಿಷಯ. ನಮ್ಮಲ್ಲಿ ಹಲವರಿಗೆ ಇದು ಸಾವು-ಬದುಕಿನ ಪ್ರಶ್ನೆಯಾಗಿದೆ. ಇಂದು ಮುಸಲ್ಮಾನರಾಗಿದ್ದವರು ಕೆಲವು ತಲೆಮಾರುಗಳ ಹಿಂದೆ ಹಿಂದೂಗಳಾಗಿದ್ದರು. ಮತಾಂತರಗೊಂಡ ಹಿಂದೂಗಳು ತಮ್ಮ ಸಂಸ್ಕೃತಿ, ಮೌಲ್ಯಗಳ ಮೇಲೆ ಉಗಿಯಬೇಕೆಂದು ಯಾರು ಹೇಳಿಕೊಟ್ಟಿದ್ದಾರೆ? ಮೊಹಮ್ಮದ್ ಇಕ್ಲಾಕ್ ಸೇರಿದಂತೆ ಎಲ್ಲಾ ಭಾರತೀಯ ಮುಸಲ್ಮಾನರು ಕೆಲವು ತಲೆಮಾರುಗಳ ಹಿಂದೆ ಹಿಂದೂಗಳಾಗಿದ್ದರು. ಅವರ ಪೂರ್ವಜರೆಲ್ಲ ಗೋವುಗಳನ್ನು ಪೂಜಿಸುತ್ತಿದ್ದರು. ಆದರೆ ಈಗ ಮುಸಲ್ಮಾನರಾಗಿ ಮತಾಂತರಗೊಂಡವರು ಹೇಗೆ ಇಷ್ಟೊಂದು ಕ್ರೂರಿಗಳಾಗಿದ್ದಾರೆ ಎಂದು ಆರ್ ಎಸ್ ಎಸ್ ಮುಖವಾಣಿಯಲ್ಲಿ ಬರೆದುಕೊಂಡಿದೆ.