ಕಾನ್ಪುರ: ಪ್ರತಿಭಟನಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು
ಕಾನ್ಪುರ: ಇಲ್ಲಿನ ಬಾಬುಪೂರ್ವ ಪ್ರದೇಶದಲ್ಲಿ ಧಾರ್ಮಿಕ ಪೋಸ್ಟರ್ ಒಂದಕ್ಕೆ ಹಾನಿ ಎಸಗಿದ್ದ ಹಿನ್ನಲೆಯಲ್ಲಿ ಹಿಂಸಾಚಾರ ಬುಗಿಲೆದ್ದಿದ್ದು, ಪ್ರತಿಭಟನಾಕಾರರು ಓರ್ವ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಓರ್ವ ಮೀಸಲು ಪಡೆಯ ಇನ್ಸ್ ಪೆಕ್ಟರ್ ಮೇಲೆ ಗುಂಡು ಹಾರಿಸಿರುವ ಘಟನೆ ವರದಿಯಾಗಿದೆ.
ಚಮನ್ ಗಂಜ್ ಪ್ರದೇಶದಲ್ಲಿ ಪ್ರತಿಭಟನಕಾರರು ನಡೆಸಿದ ಗುಂಡಿನ ದಾಳಿಯಲ್ಲಿ ಪೊಲೀಸ್ ಅಧಿಕಾರಿಗಳಾದ ಡಿ.ಕೆ. ಸಿಂಗ್ ಹಾಗೂ ಯೋಗೇಶ್ ಶರ್ಮಾ ಎಂಬವರಿಗೆ ಗುಂಡಿನ ಏಟು ತಗುಲಿದೆ. ಪೊಲೀಸ್ ಅಧಿಕಾರಿಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲದೇ ಕಲ್ಲೆಸೆತದಲ್ಲಿ ಕೆಲವರಿಗೆ ಗಾಯಗಳಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶಲಭ್ ಮಾಥೂರ್ ಹೇಳಿದ್ದಾರೆ.
ಪ್ರತಿಭಟನೆ ನಡೆಸುತ್ತಿರುವ ಗುಂಪು ಸರ್ಕಾರಿ ಹಾಗೂ ಖಾಸಗಿ ಸೊತ್ತುಗಳಿಗೆ ಹಾನಿಯುಂಟು ಮಾಡಿದ್ದು, ನಗರದಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ ಎಂದ ಅವರು, ಶುಕ್ರವಾರ ರಾತ್ರಿ ಧಾರ್ಮಿಕ ಪೋಸ್ಟರ್ ಒಂದನ್ನು ಹರಿದು ಹಾಕಲಾಗಿತ್ತು ಎಂದು ಆರೋಪಿಸಿ ಸಮುದಾಯದ ಜನರು ಪ್ರತಿಭಟನೆ ನಡೆಸಿದರು. ಸಂಜೆ ವೇಳೆಗೆ ಪರಿಸ್ಥಿತಿ ತೀವ್ರಗೊಂಡು ಹಿಂಸಾಚಾರಕ್ಕೆ ತಿರುಗಿತು. ಇಟ್ಟಿಗೆ, ಬ್ಯಾಟ್ ಮತ್ತಿತರ ವಸ್ತುಗಳಿಂದ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಕೆಲವೆಡೆ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ಇಟ್ಟಿಗೆ ಹಾಗೂ ಕಲ್ಲುಗಳನ್ನೆಸೆಯಲು ತೊಡಗಿದ ಗುಂಪನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಅಶ್ರುವಾಯುವನ್ನೂ ಸಿಡಿಸಿದರು. ಈ ವೇಳೆ ಪ್ರತಿಭಟನಾಕಾರರು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಅಧಿಕಾರಿಗಳನ್ನು ಆಸ್ಪತ್ರೆಗೆ ದಾಖಲಿಸಿಲಾಗಿದೆ ಎಂದು ಅವರು ಹೇಳಿದ್ದಾರೆ.