ಬಿಹಾರ: ದೇಶದ ಒಳಿತಿಗಾಗಿ ಮತ್ತು ಬಿಹಾರ ರಾಜ್ಯದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಮತ ನೀಡುವಂತೆ ಮತದಾರರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾನುವಾರ ಕರೆ ನೀಡಿದ್ದಾರೆ.
ಮೂರನೇ ಹಂತ ಬಿಹಾರ ವಿಧಾನಸಭಾ ಚುನಾವಣೆ ಪ್ರಯುಕ್ತ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನಿತೀಶ್ ಕುಮಾರ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ, ದೇಶದ ಒಳಿತಿಗಾಗಿ ಮತ್ತು ಅಭಿವೃದ್ಧಿಗಾಗಿ ಮತ್ತೆ ನಿತೀಶ್ ಕುಮಾರ್ ಅವರನ್ನೇ ಅಧಿಕಾರಕ್ಕೆ ಬರುವಂತೆ ಮಾಡಿ ಎಂದು ಹೇಳಿದ್ದಾರೆ.
ಬಿಹಾರ ರಾಜ್ಯದ ಸಾಕಷ್ಟು ಮಂದಿ ಪಶ್ಚಿಮ ಬಂಗಾಳದಲ್ಲೇ ವಾಸವಿರುವುದರಿಂದ ಮಮತಾ ಅವರ ಈ ಹೇಳಿಕೆ ಇದೀಗ ನಿತೀಶ್ ಕುಮಾರ್ ಮೈತ್ರಿಕೂಟಕ್ಕೆ ವರವಾಗುವ ಲಕ್ಷಣಗಳು ಕಾಣಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಮಮತಾ ಅವರ ಈ ಹೇಳಿಕೆಯನ್ನು ಇದೀಗ ಜೆಡಿಯು ರಾಜ್ಯಸಭೆ ಸದಸ್ಯ ಅಲಿ ಅನ್ವರ್ ಸ್ವಾಗತಿಸಿದ್ದು, ಮಮತಾ ಅವರು ಎಂದಿಗೂ ನಿತೀಶ್ ಕುಮಾರ್ ಅವರನ್ನು ಬೆಂಬಲಿಸಿದ್ದಾರೆ. ಬಿಜೆಪಿಯಲ್ಲಿಯೇ ಮೋದಿ ವಿರೋಧಿ ಬಿಜೆಪಿ ಬಣ ತಲೆದೋರಿದ್ದು ಚುನಾವಣೆಯಲ್ಲಿ ಜನತಾ ಪರಿವಾರಕ್ಕೆ ಬಹುಮತ ದೊರೆಯುವ ಎಲ್ಲ ಲಕ್ಷಣಗಳಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೋದಿ ಸರ್ಕಾರ ಇದೀಗ ಪ್ರಜಾಪ್ರಭುತ್ವದ ಎಲ್ಲಾ ಸಿದ್ಧಾಂತಗಳನ್ನು ವಿರೋಧಿಸುತ್ತಲೇ ಬಂದಿರುವ ಹಿನ್ನೆಲೆಯಲ್ಲಿ ದೇಶದ ಒಳಿತಿಗಾಗಿ ನಿತೀಶ್ ಕುಮಾರ್ ಅವರಿಗೆ ಮತ ನೀಡುವಂತೆ ಮಮತಾ ಅವರು ಕರೆ ನೀಡಿದ್ದಾರೆ. ಅಲ್ಲದೆ, ಎಲ್ಲಾ ರಾಜ್ಯಗಳು ಕೇಂದ್ರ ಸರ್ಕಾರದ ವಿರುದ್ಧ ಒಂದಾಗಬೇಕಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಪಶ್ಚಿಮ ಬಂಗಾಳಕ್ಕೆ ವಿಶೇಷ ಸ್ಥಾನಮಾನ ಕುರಿತಂತೆ ಮಾತನಾಡಿರುವ ಅವರು, ಪಶ್ಚಿಮ ಬಂಗಾಳಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಈಗಾಗಲೇ ನಿತೀಶ್ ಕುಮಾರ್ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆಂದು ಹೇಳಿದ್ದಾರೆ.