ಪೇಶಾವರ: ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿ ಭೂಕಂಪದಿಂದ ಸತ್ತವರ ಸಂಖ್ಯೆ 350ಕ್ಕೇರಿದೆ. ರಕ್ಷಣಾ ಕಾರ್ಯನಿರತರು ಭೂಕಂಪಪೀಡಿತ ಪ್ರದೇಶಗಳಿಗೆ ತಲುಪಲು ಹರಸಾಹಸಪಡುತ್ತಿದ್ದಾರೆ.
ಪಾಕಿಸ್ತಾನದಲ್ಲಿ 237 ಮಂದಿ ಮತ್ತು ಅಫ್ಘಾನಿಸ್ತಾನದಲ್ಲಿ 74 ಮಂದಿ ಸತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 7.5 ರಿಕ್ಟರ್ ಮಾಪನದ ಈ ಭೂಕಂಪನದ ಕೇಮದ್ರ ಹಿಂದೂಕುಷ್ ಪರ್ವತಗಳ ತಳಭಾಗದಲ್ಲಿತ್ತು. ತಜಕಿಸ್ತಾನ್, ಚೀನಾ, ಪಾಕಿಸ್ತಾನಗಳ ಗಡಿಭಾಗದ ಬದಾಕ್ಷನ್ ಭಾಗದಲ್ಲಿ ಹೆಚ್ಚಿನ ಹಾನಿ ಉಂಟುಮಾಡಿತ್ತು. ಬದಾಕ್ಷನ್‍ನ ರಾಜಧಾನಿ ಪೈಝಾಬಾದ್ ನಿಂದ 73 ಕಿ.ಮೀ. ದೂರದಲ್ಲಿರುವ ಪೀಡಿತ ಪ್ರದೇಶಕ್ಕೆ ತಲುಪಲು ರಕ್ಷಣಾಪಡೆಗಳು ಕಷ್ಟಪಡುತ್ತಿವೆ. ಪಾಕಿಸ್ತಾನದ ಸ್ವಾತ್ ಕಣಿವೆ, ಮಲಕಂಡ್, ಶಾಂಗ್ಲಾ, ದೀರ್ ನಗರಗಳು ಮತ್ತು ಖೈಬರ್ ಪಖ್ತೂನ್ ಪ್ರಾಂತ್ಯಗಳೂ ಕೂಡ ಹೆಚ್ಚಿನ ಹಾನಿಗೀಡಾಗಿವೆ.
2,000 ಮಂದಿಗೆ ಗಾಯಗಳಾಗಿದ್ದು, 2,500ಕ್ಕೂ ಅಧಿಕ ಮನೆಗಳು ಹಾನಿಗೀಡಾಗಿವೆ ಎಂದು ಪಾಕ್ ಅಧಿಕಾರಿಗಳು ತಿಳಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ 457 ಮಂದಿ ಗಾಯಗೊಂಡಿದ್ದು 1500 ಮನೆಗಳಿಗೆ ಹಾನಿಯಾಗಿದೆ. ಈ ಅಂಕಿಅಂಶಗಳು ಬೆಳೆಯುತ್ತಲೇ ಇದ್ದು, ದುರ್ಗಮ ಪ್ರದೇಶಗಳಿಗೆ ರಕ್ಷಣಾ ಕಾರ್ಯ ತಲುಪಿದ ಮೇಲೆ ಹೆಚ್ಚಿನ ಚಿತ್ರಣ ಸಿಗಲಿದೆ. ಕೆಲವೆಡೆ ಭೂಕುಸಿತದಿಂದ ರಸ್ತೆಗಳು ಹಾನಿಗೀಡಾಗಿ ದ್ದು, ತಲುಪಲು ಹೆಲಿಕಾಪ್ಟರ್ ಗಳು ಅಗತ್ಯವಾಗಿವೆ.