ಪಾಟ್ನ: ಬಹು ನಿರೀಕ್ಷಿತ ಬಿಹಾರ ವಿಧಾನಸಭಾ ಚುನಾವಣೆಯ ಮೂರನೇ ಹಂತದ ಮತದಾನ ಬುಧವಾರ ಆರಂಭಗೊಂಡಿದ್ದು, ಮತದಾನ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ.
ಮೂರನೇ ಹಂತದ ಈ ಚುನಾವಣೆಯು ಇಂದು ಬೆಳಿಗ್ಗೆ 7 ರಿಂದ 5 ಗಂಟೆಯವರೆಗೂ ನಡೆಯಲಿದ್ದು, ಬಿಹಾರದ ಪಾಟ್ನ, ನಳಂದಾ, ಬಕ್ಸರ್, ಭೋಜ್ ಪುರ, ವೈಶಾಲಿ ಜಿಲ್ಲೆಗಳಲ್ಲಿ ಈಗಾಗಲೇ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.
ಇಂದು ನಡೆಯುತ್ತಿರುವ ಮತದಾನ ಪ್ರಕ್ರಿಯೆಯು 50 ಕ್ಷೇತ್ರಗಳಲ್ಲಿ ನಡೆಯುತ್ತಿದ್ದು ಸುಮಾರು 1.45 ಮತದಾರರು ಭಾಗವಹಿಸಲಿದ್ದಾರೆ. 71 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 808 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಮಹುವಾ ಮತ್ತು ರಘೋಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಅವರ ಪುತ್ರರಾದ ತೇಜ್ ಪ್ರತಾಪ್ ತೇಜಸ್ವಿ ಯಾದವ್ ಅವರು ಅದೃಷ್ಟ ಪರೀಕ್ಷೆಗಿಳಿದಿದ್ದು, ಇಂದು ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಇಬ್ಬರ ಭವಿಷ್ಯವು ನಿರ್ಧಾರವಾಗಲಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತವರು ಕ್ಷೇತ್ರ ನಳಂದಾದ 7 ಹಾಗೂ ಲಾಲು ಪ್ರಸಾದ್ ಯಾದವ್ ಪ್ರಾಬಲ್ಯವಿರುವ ಸರನ್ ಜಿಲ್ಲೆಯ ಹತ್ತು ವಿಧಾನಸಭಾ ಕ್ಷೇತ್ರಗಳಲ್ಲೂ ಇಂದು ಮತದಾನ ನಡೆಯಲಿದೆ.
ಬಿಹಾರದಲ್ಲಿ ನಡೆಯುತ್ತಿರುವ ಚುನಾವಣೆ ಪ್ರಕ್ರಿಯೆಯ 50 ಕ್ಷೇತ್ರಗಳಲ್ಲಿ 14,170 ಮತಗಟ್ಟೆಗಳಿದ್ದು, ಇದರಲ್ಲಿ 6,747 ಸೂಕ್ಷ್ಮ ಪ್ರದೇಶ ಹಾಗೂ 19,909 ನಕ್ಸಲ್ ಪೀಡಿತ ಪ್ರದೇಶಗಳಿವೆ. ಹೀಗಾಗಿ ಮತದಾನ ಪ್ರಕ್ರಿಯೆಗೆ ಯಾವುದೇ ತೊಡಕಾಗದಂತೆ ಎಚ್ಚರಿಕೆ ವಹಿಸಿರುವ ಚುನಾವಣಾ ಆಯೋಗವು ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅರೆಸೇನಾ ಪಡೆಗಳನ್ನು ನಿಯೋಜಿಸಿದೆ
ಇನ್ನುಳಿದಂತೆ 2 ಸುತ್ತಿನ ಮತದಾನವು ನವೆಂಬರ್ 1 ಹಾಗೂ 5ರಂದು ನಡೆಯಲಿದ್ದು, ಚುನಾವಣೆಯ ಫಲಿತಾಂಶವು ನ. 8ರಂದು ಪ್ರಕಟವಾಗಲಿದೆ.