ಬಿಕನೇರ್: ಜೈನರ ಪವಿತ್ರ ಸಲ್ಲೇಖನ ವ್ರತ ದೀಕ್ಷೆಯನ್ನು ಕೈಕೊಂಡಿರುವ 82ರ ಹರೆಯದ ವೃದ್ಧೆ ತಮ್ಮ ಕೊನೆಗಾಲದಲ್ಲಿ ಕೆಲ ಚಮಚ ನೀರು ಸೇವನೆ ಮಾಡುವ ಮೂಲಕ ಜೀವವನ್ನು ಸಾಗಿಸುತ್ತಿದ್ದಾರೆ.
ಜೈಪುರದಿಂದ 330 ಕಿ.ಮೀ ದೂರದಲ್ಲಿರುವ ಬಿಕನೆರ್ ನಲ್ಲಿ 82 ವರ್ಷದ ಬದ್ನಿ ದೇವಿ ಎಂಬುವರು ತಮ್ಮ ಮೂರು ಮಕ್ಕಳು, ಸೊಸೆಯಂದಿರು ಹಾಗೂ ಮೆಮ್ಮಕ್ಕಳೊಂದಿಗೆ ತುಂಬು ಕುಟುಂಬದಲ್ಲಿ ಬದುಕುತ್ತಿದ್ದಾರೆ. 82 ವರ್ಷಗಳ ಕಾಲ ಆರ್ಯುರ್ ಆರೋಗ್ಯದಿಂದ ಬದುಕಿದ ಅವರು ಕಳೆದ ಎರಡು ತಿಂಗಳಿನಿಂದ ಕೆಲ ಚಮಚ ನೀರಿನೊಂದಿಗೆ ಬದುಕುತ್ತಿದ್ದು, ಮೋಕ್ಷಕ್ಕಾಗಿ ಕಾಯುತ್ತಿದ್ದಾರೆ.
ಬದ್ನಿ ದೇವಿಗೆ ದಾಹವಾದಾಗ ನೀರು ಕುಡಿಸುವಂತೆ ಕೈ ಬೆರಳನ್ನು ಮೇಲಕ್ಕೇತ್ತುತ್ತಾರೆ, ಸಾಕೆಂದಾಗ ಕೈ ಮತ್ತೆ ಮೇಲಕ್ಕೇತ್ತುತ್ತಾರೆ ಹೀಗೆ ಕಳೆದ ಎರಡು ತಿಂಗಳನಿಂದ ಪದ್ದತಿ ನಡೆದು ಬಂದಿದೆ.
ಸ್ವಯಂ ಇಚ್ಛೆಯಿಂದ ಬದ್ನಿ ದೇವಿಯವರು ಜೈನರ ಪವಿತ್ರ ಆಚರಣೆಯಾದ ಸಲ್ಲೇಖನ ವ್ರತ ದೀಕ್ಷೆಯನ್ನು ಸ್ವೀಕರಿಸಿದ್ದಾರೆ. ಇದರಿಂದಾಗೇ ಅವರು ಕಳೆದ ಎರಡು ತಿಂಗಳಿಂದ ಆಹಾರಾದಿಗಳನ್ನು ಬಿಟ್ಟು ಬರಿಯ ನೀರಿನಲ್ಲಿ ಕಾಲಕಳೆಯುತ್ತಿದ್ದಾರೆ.
ಸಲ್ಲೇಖನ ದೀಕ್ಷೆ ಸ್ವೀಕರಿಸುವ ವ್ಯಕ್ತಿಯು ತನ್ನ ಇಚ್ಛೆಗೆ ಅನುಗುಣವಾಗಿ ನೀರು ಆಹಾರಾದಿಗಳನ್ನು ಬಿಟ್ಟು ಮೋಕ್ಷ ಪ್ರಾಪ್ತಿಗಾಗಿ ಹಂಬಲಿಸುತ್ತಾ ಜೀವ ತ್ಯಾಗ ಮಾಡುವ ಸಲ್ಲೇಖನ ವ್ರತವನ್ನು ಆತ್ಮಹತ್ಯೆ ಎಂದು ಪರಿಗಣಿಸಿ ರಾಜಸ್ಥಾನ ಹೈಕೋರ್ಟ್ ಆಗಸ್ಟ್ 10ರಂದು ತೀರ್ಪು ನೀಡಿತ್ತು. ಇದಕ್ಕೆ ಸುಪ್ರೀಂಕೋರ್ಟ್ ಆಗಸ್ಟ್ 31ರಂದು ತಡೆಯಾಜ್ಞೆ ನೀಡಿದ್ದ ಬೆನ್ನಲ್ಲೇ ಬದ್ನಿ ದೇವಿಯವರು ಸಲ್ಲೇಖನ ವ್ರತವನ್ನು ಬಹಿರಂಗವಾಗಿ ಮುಂದುವರಿಸಿದ್ದಾರೆ.