ಲಕ್ನೋ: ಬಿಲ್ ಕ್ಲಿಂಟನ್ ಫೌಂಡೇಶನ್ ಗೆ ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ನೀಡಿರುವ 25 ಕೋಟಿ ರೂ ದೇಣಿಗೆ ಸಂಬಂಧ ವಿವರವಾದ ವರದಿ ನೀಡುವಂತೆ ಅಲಹಾಬಾದ್ ಹೈಕೋರ್ಟ್ ಜಾರಿ ನಿರ್ದೇಶಾನಾಲಯಕ್ಕೆ ಸೂಚಿಸಿದೆ.
ಹಣ ನೀಡಿರುವ ಸಂಬಂಧ ಸಂಪೂರ್ಣ ವರದಿ ನೀಡಲು ಜಾರಿ ನಿರ್ದೇಶಾನಾಲಯಕ್ಕೆ ಕೋರ್ಟ್ 4 ವಾರಗಳ ಗಡುವು ನೀಡಿದೆ. ಅಮರ್ ಸಿಂಗ್ ಬಿಲ್ ಕ್ಲಿಂಟನ್ ಫೌಂಡೇಶನ್ ಗೆ 25 ಕೋಟಿ ಹಣ ನೀಡಿದ್ದರ ಸಂಬಂಧ ವಕೀಲ ಅಶೋಕ್ ಸಿಂಗ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಸಿಬಿಐ ನಿರ್ದೇಶಕರನ್ನು ಪ್ರಶ್ನಿಸಿದೆ.
2011 ರಲ್ಲಿ ಅಮರ್ ಸಿಂಗ್ ವಿರುದ್ಧಹಣ ದುರುಪಯೋಗ ಸಂಬಂಧ ದೂರು ದಾಖಲಾಗಿತ್ತು. ಅವರ ವಿರುದ್ಧ ಕ್ರಮ ಕೈಗೊಳ್ಳಲು ಹೈ ಕೋರ್ಟ್ ಸೂಚಿಸಿತ್ತು. ಆದರೆ ನಂತರ ಅಧಿಕಾರಕ್ಕೆ ಬಂದ ಸಮಾಜವಾದಿ ಪಕ್ಷ ಪ್ರಕರಣವನ್ನು ಮುಚ್ಚಿ ಹಾಕಿತ್ತು.
ನಂತರ ಅರ್ಜಿದಾರ ಅಶೋಕ್ ಸಿಂಗ್ ಕೇಸನ್ನು ವಾಪಸ್ ತೆಗೆದುಕೊಳ್ಳುವುದಾಗಿ ಮನವಿ ಮಾಡಿದ್ದರು, ಆದರೆ ನ್ಯಾಯಮೂರ್ತಿ ಚಂದ್ರ ಚೂಡ್ ಅವರನ್ನೊಳಗೊಂಡ ನ್ಯಾಯಪೀಠ ಅಶೋಕ್ ಸಿಂಗ್ ಅವರ ಮನವಿಯನ್ನು ತಿರಸ್ಕರಿಸಿತ್ತು. ನಂತರ ವಿಚಾರಣೆ ನಡೆಸಿದ ಅಲಹಬಾದ್ ಹೈ ಕೋರ್ಟ್ ಅಕ್ಟೋಬರ್ 4 ಕ್ಕೆ ವಿಚಾರಣೆ ಮುಂದೂಡಿದೆ.