ನವದೆಹಲಿ: ಕಡೆಗೂ ಮಾಜಿ ಸೈನಿಕರ ಹೋರಾಟಕ್ಕೆ ಮಣಿದಿರುವ ನರೇಂದ್ರ ಮೋದಿ ಸರ್ಕಾರ ಕಳೆದ ನಾಲ್ಕು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ 'ಸಮಾನ ಶ್ರೇಣಿ, ಸಮಾನ ಪಿಂಚಣಿ(ಒಆರ್ಒಪಿ)' ಯೋಜನೆಯನ್ನು ಶನಿವಾರ ಜಾರಿಗೊಳಿದೆ.
ಇಂದು ಮಧ್ಯಾಹ್ನ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, ನಿವೃತ್ತ ಯೋಧರ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿದ್ದು, ಇಂದಿನಿಂದ ಒಆರ್ಒಪಿ ಯೋಜನೆಯನ್ನು ಜಾರಿಗೊಳಿಸುತ್ತಿರುವುದಾಗಿ ತಿಳಿಸಿದರು. ಅಲ್ಲದೆ ಈ ಯೋಜನೆ ಜಾರಿಯಿಂದ 8 ರಿಂದ 10 ಸಾವಿರ ಕೋಟಿ ರುಪಾಯಿ ಖರ್ಚಾಗಲಿದೆ ಎಂದರು.
ಒಆರ್ಒಪಿ ಯೋಜನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಬದ್ಧತೆ ತೋರಿದ್ದು, ನಾವು ನಮ್ಮ ಭರವಸೆಯನ್ನು ಈಡೇರಿಸಿದ್ದೇವೆ ಎಂದು ರಕ್ಷಣಾ ಸಚಿವರು ತಿಳಿಸಿದರು.
2014, ಜುಲೈ 1ರಿಂದಲೇ ಪೂರ್ವಾನ್ವಯವಾಗುವಂತೆ ಯೋಜನೆ ಜಾರಿಯಾಗಿದ್ದು, ಪ್ರತಿ ಐದು ವರ್ಷಕೊಮ್ಮೆ ಪಿಂಚಣಿ ಪರಿಷ್ಕರಣೆ ಮಾಡುವುದಾಗಿ ರಕ್ಷಣಾ ಸಚಿವರು ಹೇಳಿದ್ದಾರೆ.
ಇನ್ನು ಯೋಜನೆ ಜಾರಿ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿವೃತ್ತ ಮೇಜರ್ ಜನರಲ್ ಸತ್ಬೀರ್ ಸಿಂಗ್ ಅವರು, 40 ವರ್ಷಗಳಿಂದ ಜಾರಿ ಆಗದಿರುವುದನ್ನು ಇಂದು ಜಾರಿಗೊಳಿಸಿದ್ದಾರೆ. ಆದರೆ ಸ್ವಯಂ ನಿವೃತ್ತಿ ವಿಚಾರದಲ್ಲಿ ನಮಗೆ ಸ್ಪಷ್ಟೀಕರಣ ಬೇಕು ಎಂದಿದ್ದಾರೆ. ಅಲ್ಲದೆ ವಿಆರ್ಎಸ್ ಪಡೆದವರನ್ನು ಯೋಜನೆಯಿಂದ ಹೊರಗಿಡುವುದಕ್ಕೆ ನಮ್ಮ ಒಪ್ಪಿಗೆಯಿಲ್ಲ ಎಂದು ತಿಳಿಸಿದ್ದಾರೆ.
ಒಆರ್ಒಪಿ ಯೋಜನೆ ಜಾರಿಗೆ ಒತ್ತಾಯಿಸಿ ಕಳೆದ ಆಗಸ್ಟ್ 14ರಿಂದ ಮಾಜಿ ಸೈನಿಕರು ದೆಹಲಿಯ ಜಂತರ್ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.