ಹೈದ್ರಾಬಾದ್: ಭಾನುವಾರ ಆಂಧ್ರ ಪ್ರದೇಶದ ವಿವಿಧ ಪ್ರದೇಶಗಳಲ್ಲಿ ಸಿಡಿಲು ಬಡಿದು ಒಟ್ಟು 20 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಭಾನುವಾರ ಸುರಿದ ಕುಂಭದ್ರೋಣ ಮಳೆಗೆ ಆಂಧ್ರ ಪ್ರದೇಶದ ಹಲವು ಪ್ರದೇಶಗಳು ಮುಳುಗಡೆಯಾಗಿವೆ.
ನೆಲ್ಲೂರ್ ಜಿಲ್ಲೆಯಲ್ಲಿ 6, ಕೃಷ್ಣಾ ಮತ್ತು ಪ್ರಕಾಶಂ ಜಿಲ್ಲೆಗಳಲ್ಲಿ ತಲಾ ನಾಲ್ವರು ಸಾವನ್ನಪ್ಪಿದ್ದಾರೆ. ಗುಂಟೂರ್ ಮತ್ತು ಪೂರ್ವ ಗೋದಾವರಿಯಲ್ಲಿ ಇಬ್ಬರು, ಅನಂತಪುರ ಮತ್ತು ಶ್ರೀಕಾಕುಲಂ ಜಿಲ್ಲೆಯಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ.
ಸಿಡಿಲು ಬಡಿದು ಸಾವಿಗೀಡಾದವರ ಕುಟುಂಬಗಳಿಗೆ ಆಂಧ್ರಪ್ರದೇಶ ಸರ್ಕಾರ ರು. 4 ಲಕ್ಷ ಪರಿಹಾರ ಧನ ಘೋಷಿಸಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವುಂಟಾದ ಕಾರಣ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರೀ ಮಳೆಯುಂಟಾಗಿತ್ತು. ತಗ್ಗು ಪ್ರದೇಶಗಳೆಲ್ಲಾ ನೀರಿನಿಂದಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಇನ್ನು ಎರಡ್ಮೂರು ದಿನಗಳ ವರೆಗೆ ಇಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.