ಪಾಟ್ನಾ: ಆರ್.ಜೆ.ಡಿ- ಜೆಡಿಯು ಮೈತ್ರಿ ತೊರೆದಿರುವ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ವಿರುದ್ಧ ಮಾತನಾಡದೇ ಇರಲು ಆರ್.ಜೆ.ಡಿ-ಜೆಡಿಯು ನಾಯಕರು ನಿರ್ಧರಿಸಿದ್ದಾರೆ.
ಮುಲಾಯಂ ಸಿಂಗ್ ಯಾದವ್, ಆರ್.ಜೆ.ಡಿ-ಜೆಡಿಯುನೊಂದಿಗಿನ ಮೈತ್ರಿ ತೊರೆದಿರುವುದು ಬಿಹಾರ ಚುನಾವಣೆಯ ಹಿನ್ನೆಲಯಲ್ಲಿ ಮಹತ್ವ ಪಡೆದುಕೊಂಡಿತ್ತು. ಮೈತ್ರಿ ತೊರೆದ ಮುಲಾಯಂ ಸಿಂಗ್ ಅವರನ್ನು ದೂಷಿಸದೇ ಇರಲು ಲಾಲು ಪ್ರಸಾದ್ ಹಾಗೂ ನಿತೀಶ್ ಕುಮಾರ್ ನಿರ್ಧರಿಸಿದ್ದಾರೆ. ಈ ವಿಷಯವನ್ನು ಸ್ವತಃ ಲಾಲು ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
"ಮುಲಾಯಂ ಸಿಂಗ್ ಅವರ ಹೇಳಿಕೆಗೆ ವಿರುದ್ಧವಾಗಿ ಹೇಳಿಕೆ ನೀಡದೇ ಇರಲು ಆರ್.ಜೆ.ಡಿ- ಜೆಡಿಯು ನಿರ್ಧರಿಸಿದೆ. ಮುಲಾಯಂ ಸಿಂಗ್ ಸಮಾಜವಾದಿ ಪಕ್ಷದ ಮುಖಂಡ ಮಾತ್ರವಲ್ಲ ಅವರು ನನ್ನ ಸಂಬಂಧಿ, ಅವರು ಹೆಚ್ಚು ಕೋಪ ಮಾಡಿಕೊಂಡರೆ ಹಳದಿ ಧೋತಿ(ಮದುವೆ
ಸಂದರ್ಭದಲ್ಲಿ ಧರಿಸುವ ವಸ್ತ್ರ) ನೀಡುತ್ತೇವೆ" ಎಂದು ಲಾಲು ಪ್ರಸಾದ್ ಯಾದವ್ ಲಘು ಧಾಟಿಯಲ್ಲಿ ಹೇಳಿದ್ದಾರೆ.
ಮುಲಾಯಂ ಸಿಂಗ್ ಯಾದವ್ ಮೈತ್ರಿ ತೊರೆದ ಬಗ್ಗೆ ಮಾತನಾಡಿರುವ ನಿತೀಶ್ ಕುಮಾರ್, ಮೈತ್ರಿಕೂಟದಲ್ಲೆ ಉಳಿಸಿಕೊಳ್ಳಲು ಜೆಡಿಯು ಅಧ್ಯಕ್ಷ ಶರದ್ ಯಾದವ್ ಯತ್ನಿಸಿದರು, ಆದರೆ ಯತ್ನಗಳೆಲ್ಲಾ ವಿಫಲವಾಯಿತು. ಪ್ರತಿಯೊಂದು ಪಕ್ಷಕ್ಕೂ ತನ್ನದೇ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯವಿದೆ, ಮುಲಾಯಂ ಸಿಂಗ್ ಯಾದವ್ ಮೈತ್ರಿಯಿಂದ ದೂರವಿರುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.