ನವದೆಹಲಿ: ಶೀನಾ ಬೋರಾ ಹತ್ಯೆ ಪ್ರಕರಣದ ತನಿಖೆ ಒಂದು ತಾರ್ಕಿಕ ಅಂತ್ಯಕ್ಕೆ ಬರುವವರೆಗೆ ಮಾಜಿ ಮುಂಬೈ ಪೊಲೀಸ್ ಆಯುಕ್ತ ರಾಕೇಶ್ ಮರಿಯಾ ಅವರ ವರ್ಗಾವಣೆ ಆದೇಶವನ್ನು ದೇವೇಂದ್ರ ಫಡ್ನವಿಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಹಿಂಪಡೆಯಬೇಕು ಎಂದು ಕಾಂಗ್ರೆಸ್ ನಾಯಕ ಸಂಜಯ್ ನಿರುಪಂ ಅವರು ಆಗ್ರಹಿಸಿದ್ದಾರೆ.
ಮರಿಯಾ ವರ್ಗಾವಣೆ ಶೀನಾ ಬೋರಾ ಹತ್ಯೆ ಪ್ರಕರಣದ ತನಿಖೆಯ ಮೇಲೆ ಪರಿಣಾಮ ಬೀರಲಿದೆ ಎಂದಿರುವ ನಿರುಪಂ, ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದ ತನಿಖೆಯನ್ನು ತಡೆಯಲು ಕಾರ್ಪೊರೇಟ್ ವಲಯ ಸರ್ಕಾರದ ಮೇಲೆ ರಾಜಕೀಯ ಒತ್ತಡ ಹೇರಿರುವುದು ಇದರಿಂದ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ಸುಮಾರು 800 ಕೋಟಿ ರುಪಾಯಿ ಅವ್ಯವಹಾರದಲ್ಲಿ ಹಲವು ಕಾರ್ಪೊರೇಟ್ ಕಂಪನಿಗಳು ಭಾಗಿಯಾಗಿವೆ ಎಂದು ನಿರುಪಂ ಅವರು ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ರಾಕೇಶ್ ಮರಿಯಾ ಅವರು ಈಗಾಗಲೇ ಸೆಪ್ಟೆಂಬರ್ 30ರೊಳಗೆ ಚಾರ್ಜ್‌ಶೀಟ್ ಸಲ್ಲಿಸುವುದಾಗಿ ಹೇಳಿದ್ದಾರೆ. ಪ್ರಕರಣ ತಾರ್ಕಿಕ ಅಂತ್ಯ ಕಾಣಬೇಕಾದರೆ ಮಹಾರಾಷ್ಟ್ರ ಸರ್ಕಾರ ಮರಿಯಾ ವರ್ಗಾವಣೆ ಆದೇಶವನ್ನು ಹಿಂಪಡೆಯಬೇಕು ಎಂದಿದ್ದಾರೆ.
ಮರಿಯಾ ಅವರನ್ನು ಮಹಾರಾಷ್ಟ್ರ ಸರ್ಕಾರ ನಿನ್ನೆ ಗೃಹ ರಕ್ಷಕ ದಳದ ಡಿಜಿಯಾಗಿ ವರ್ಗಾವಣೆ ಮಾಡಿತ್ತು.