ಲಕ್ನೋ: ಉತ್ತರ ಪ್ರದೇಶದ ಲಕ್ನೋದಲ್ಲಿ ನಿರುದ್ಯೋಗ ಸಮಸ್ಯೆ ಮೇರೆ ಮೀರಿದೆ. ರಾಜ್ಯ ಸಚಿವಾಲಯದಲ್ಲಿ ಇರುವ 368 ಜವಾನರ ಹುದ್ದೆಗೆ ಸುಮಾರು 23 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ಲಕ್ನೋದಲ್ಲಿ ಇರುವ ಜನಸಂಖ್ಯೆ ಅಂದರೆ ಒಟ್ಟು 45 ಲಕ್ಷ ಜನರಿದ್ದು ಅದರಲ್ಲಿ 23 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕಿಂತ ಹೆಚ್ಚಿನ ಆಘಾತದ ವಿಷಯವೆಂದರೆ ಜವಾನರ ಹುದ್ದೆಗೆ 2 ಲಕ್ಷಕ್ಕಿಂತ ಹೆಚ್ಚಿನ ಪದವೀದರರು, ಅಂದರೆ ಬಿ.ಟೆಕ್, ಬಿಎಸ್ಸಿ, ಎಂ.ಎಸ್ಸಿ ಮತ್ತು ಎಂ.ಕಾಂ ಪದವೀದರರು ಜವಾನ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಸುಮಾರು 225 ಮಂದಿ ಪಿಎಚ್ ಡಿ ಪದವೀದರರು ಕೂಡ ಕೆಲಸಕ್ಕೆ ಅರ್ಜಿ ಹಾಕಿದ್ದಾರೆ.
ಉತ್ತರ ಪ್ರದೇಶ ಸಚಿವಾಲಯ ಆಡಳಿತ ಮಂಡಳಿ ಈ ವಿವರ ನೀಡಿದ್ದು, ಆನ್ ಲೈನ್ ನಲ್ಲಿ ಬಂದ ಅರ್ಜಿಗಳ ನೋಡಿ ಆಶ್ಚರ್ಯ ವ್ಯಕ್ತ ಪಡಿಸಿದೆ. ಜವಾನರ ಹುದ್ದೆಗೆ ನೇರ ನೇಮಕಾತಿ ನಡೆಯಲಿದ್ದು ಸುಮಾರು 2 ವರ್ಷ ಸಮಯ ತೆಗೆದುಕೊಳ್ಳಲಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.