ಬೆಂಗಳೂರು: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಕರ್ನಾಟಕ ಭೇಟಿಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಅಕ್ಟೋಬರ್ ಎರಡನೇ ವಾರದಲ್ಲಿ ಅಂದರೆ ಅಕ್ಟೋಬರ್ 6 ಮತ್ತು 7 ರಂದು ರಾಹುಲ್ ರಾಜ್ಯಕ್ಕೆ ಆಗಮಿಸಲಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ 'ರಾಹುಲ್ ಗಾಂಧಿ ಅಕ್ಟೋಬರ್ 2ನೇ ವಾರದಲ್ಲಿ ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಮಂಡ್ಯ ಮತ್ತು ಬೆಳಗಾವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಲಿದ್ದಾರೆ ಎಂದು ತಿಳಿಸಿದರು.
ಜುಲೈ ತಿಂಗಳಿನಲ್ಲಿಯೇ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಕೈಗೊಳ್ಳಬೇಕಿತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಮತ್ತು ಮಾಜಿ ಕೇಂದ್ರ ಸಚಿವ ಚಲ್ಲಂರಾಜು ಅವರು ಮಂಡ್ಯಕ್ಕೆ ಭೇಟಿ ನೀಡಿ ಆತ್ಮಹತ್ಯೆ ಮಾಡಿಕೊಂಡ ರೈತರ ಬಗ್ಗೆ ಮಾಹಿತಿ ಸಂಗ್ರಹಿಸಿ, ವರದಿ ನೀಡಿದ್ದರು.ಆದರೆ, ಬಿಬಿಎಂಪಿ ಚುನಾವಣೆ ಎದುರಾಗಿದ್ದರಿಂದ ರಾಹುಲ್ ಭೇಟಿ ಮುಂದೂಡಲಾಗಿತ್ತು.