ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಂಪಾರಣ್‌ನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ಬೃಹತ್ ರ್ಯಾಲಿ ನಡೆಸುತ್ತಿದ್ದು, ರ್ಯಾಲಿಗೂ ಮುನ್ನ ಏರ್‌ಗನ್ ಪತ್ತೆಯಾಗಿ, ಕೆಲಕಾಲ ಆತಂಕ ಸೃಷ್ಟಿ ಮಾಡಿತ್ತು.
ಏರ್‌ಗನ್‌ನೊಂದಿಗೆ ರ್ಯಾಲಿಗೆ ಆಗಮಿಸಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ನೇತೃತ್ವದ ಮಹಾ ಮೈತ್ರಿಕೂಟದ ಪರವಾಗಿ ರಾಹುಲ್ ಗಾಂಧಿ ಅವರು ಇಂದು ಪ್ರಚಾರ ನಡೆಸುತ್ತಿದ್ದಾರೆ. ಆದರೆ ಈ ರ್ಯಾಲಿಗೆ ನಿತಿಶ್ ಕುಮಾರ್ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಗೈರು ಆಗುತ್ತಿದ್ದಾರೆ.
ನಿತಿಶ್ ಕುಮಾರ್ ಪೂರ್ವನಿಯೋಜಿತ ಕಾರ್ಯಕ್ರಮದ ಕಾರಣ ನೀಡಿದ್ದಾರೆ. ಇನ್ನು ಭ್ರಷ್ಟಾಚಾರ ಪ್ರಕರಣಗಳ ತಪ್ಪಿತಸ್ಥ ವ್ಯಕ್ತಿಗಳ ರಕ್ಷಣೆಗೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ತರಲು ಮುಂದಾಗಿದ್ದನ್ನು ರಾಹುಲ್ ವಿರೋಧಿಸಿದ್ದಕ್ಕೆ ಅವರ ಜತೆ ಲಾಲು ಮುನಿಸಿ ಕೊಂಡಿದ್ದಾರೆ.