ಪಟನಾ/ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆಯು ಕೇಂದ್ರ ಸಚಿವ, ಎಲ್‍ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಅವರ ಕುಟುಂಬದೊಳಗೇ ಭಿನ್ನಮತ ಸೃಷ್ಟಿಸಿದೆ.
ಪುತ್ರ ಚಿರಾಗ್‍ಗೇ ಎಲ್ಲ ಅಧಿಕಾರಗಳನ್ನು ನೀಡುತ್ತಿರುವುದು ಪಾಸ್ವಾನ್‍ರ ಅಳಿಯ ಅನಿಲ್ ಕುಮಾರ್ ಸಧುಗೆ ರುಚಿಸಿಲ್ಲ. ಅಲ್ಲದೆ, ಈ ಬಾರಿ ಅನಿಲ್‍ಗೆ ಟಿಕೆಟ್ ನಿರಾಕರಿಸಲಾಗಿದ್ದು, ಅವರ ಆಕ್ರೋಶಕ್ಕೆ ಮತ್ತೊಂದು ಕಾರಣ. ಪಕ್ಷದ ದಲಿತ ಸೇನೆಯ ನೇತೃತ್ವ ವಹಿಸಿರುವ ಅನಿಲ್, 2010ರ ಚುನಾವಣೆಯಲ್ಲಿ 53 ಸಾವಿರ ಮತ ಗಳಿಸಿದ್ದರೂ ನನ್ನನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದ್ದಾರೆ. ಇವರ ಮುಂದಿನ ನಡೆ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.
2 ಸೀಟುಗಳಲ್ಲಿ ಕಣಕ್ಕೆ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ, ಹಿಂದುಸ್ಥಾನಿ ಅವಾಮ್ ಮೋರ್ಚಾ(ಎಚ್‍ಎಎಂ) ಅಧ್ಯಕ್ಷ ಜಿತನ್ ರಾಂ ಮಾಂಜಿ ಅವರು ಎರಡು ಸೀಟುಗಳಲ್ಲಿ ಸ್ಪರ್ಧಿಸಲಿದ್ದಾರೆ. ಗಯಾ ಜಿಲ್ಲೆಯ ಇಮಾಮ್ ಗಂಜ್ ಮತ್ತು ಜಹಾನಾಬಾದ್‍ನ ಮಖದೂಮ್ ಪುರದಲ್ಲಿ ಅವರು ಕಣಕ್ಕಿಳಿಯಲಿದ್ದಾರೆ. ಮಾಂಜಿ ಅವರ ಎಚ್‍ಎಎಂ ಶನಿವಾರ 7 ಅಸೆಂಬ್ಲಿ ಸೀಟುಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.