ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಏಳು ದಿನಗಳ ವಿದೇಶ ಪ್ರವಾಸ ಕೈಗೊಂಡಿರುವ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, ಪ್ರಧಾನಿಯ ನಿರಂತರ ವಿದೇಶ ಪ್ರವಾಸದಿಂದ ದೇಶಕ್ಕೇನು ಲಾಭ ಎಂದು ಪ್ರಶ್ನಿಸಿದೆ.
"ಮೋದಿ ವಿದೇಶಗಳಿಗೆ ನಿರಂತರವಾಗಿ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಆದರೆ ಈ ವರೆಗೂ ದೇಶಕ್ಕೆ ಯಾವುದೇ ರೀತಿಯ ಲಾಭವಾಗಿಲ್ಲ ಎಂದು ಕಾಂಗ್ರೆಸ್ ವಕ್ತಾರ ಆರ್.ಪಿ.ಎನ್ ಸಿಂಗ್ ಹೇಳಿದ್ದಾರೆ. ಅಮೇರಿಕ ಪ್ರವಾಸದ ವೇಳೆ 3 .1 ಬಿಲಿಯನ್ ಡಾಲರ್ ಮೌಲ್ಯದ ಬೋಯಿಂಗ್ ಹೆಲಿಕಾಫ್ಟರ್ ಖರೀದಿ ಒಪ್ಪಂದದಿಂದ 'ಮೇಕ್ ಇನ್ ಅಮೆರಿಕಾ'ಗೆ ಸಹಕಾರಿಯಾಗಲಿದೆಯೇ ಹೊರತು ಮೋದಿಯೇ ಪ್ರಾರಂಭಿಸಿರುವ 'ಮೇಕ್ ಇನ್ ಇಂಡಿಯಾ'ಗೆ ಯಾವುದೇ ರೀತಿಯ ಸಹಾಯಕಾರಿಯಾಗುವುದಿಲ್ಲ ಎಂದು ಹೇಳಿದ್ದಾರೆ.
ವಿದೇಶಗಳಿಗೆ ಪ್ರಧಾನಿ ಮೋದಿ ಆಗಾಗ್ಗೆ ಭೇಟಿ ನೀಡುತ್ತಿರುವುದರಿಂದ ನೇಪಾಳವು ಭಾರತದ ಕ್ರಮಗಳನ್ನು ಪ್ರಶ್ನಿಸುವಂತಾಗಿದೆ ಎಂದು ಸಿಂಗ್ ಆರೋಪಿಸಿದ್ದಾರೆ. ಬಿಜೆಪಿ ನಾಯಕರು ರಾಹುಲ್ ಗಾಂಧಿ ಅವರನ್ನು ಟಾರ್ಗೆಟ್ ಮಾಡುವುದಕ್ಕಿಂತಲೂ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವತ್ತ ಗಮನ ಹರಿಸಲಿ ಎಂದು ಸಲಹೆ ನೀಡಿದ್ದಾರೆ.