ಲಖನೌ: ಪಾಕಿಸ್ತಾನ ಭಯೋತ್ಪಾದನೆ ಮೂಲಕ ಭಾರತದ ಮೇಲೆ ಪರೋಕ್ಷ ಯುದ್ಧ(ಪ್ರಾಕ್ಸಿ ವಾರ್) ನಡೆಸುತ್ತಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಆರೋಪಿಸಿದ್ದಾರೆ.
ಪಾಕಿಸ್ತಾನ- ಚೀನಾದೊಂದಿಗಿನ ಭಾರತದ ಗಡಿ ಪ್ರದೇಶಗಳು ಸೂಕ್ಷ್ಮವಾಗಿದ್ದು, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಹಿಂದುಸ್ಥಾನ್ ಮೀಡಿಯಾ ವೆಂಚರ್ಸ್ ನಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಜನಾಥ್ ಸಿಂಗ್, ಪಾಕಿಸ್ತಾನ ನಿರಂತರವಾಗಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಇದರೊಂದಿಗೆ ಭಾರತದ ವಿರುದ್ಧ ಭಯೋತ್ಪಾದಕರ ಮೂಲಕ ಪರೋಕ್ಷ ಯುದ್ಧ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಭಯೋತ್ಪಾದಕರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಠಿಣ ನಿಲುವು ಹೊಂದಿದ್ದು, ಅದರ ಪರಿಣಾಮವಾಗಿ ಈ ವರೆಗೂ 130 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಚೀನಾದೊಂದಿಗೆ ಇರುವ ಗಡಿ ವಿವಾದವನ್ನು ಇತ್ಯರ್ಥಗೊಳಿಸಲು ಯತ್ನಿಸಲಾಗುತ್ತಿದೆ ಎಂದು ಇದೇ ವೇಳೆ ತಿಳಿಸಿದ್ದಾರೆ.