ದೇಶ

ಭಾರತದ ಗಾನಕೋಗಿಲೆಗೆ ಹುಟ್ಟುಹಬ್ಬದ ಸಂಭ್ರಮ

Sumana Upadhyaya

ಮುಂಬೈ: ಭಾರತದ ಕೋಗಿಲೆ ಎಂದೇ ಖ್ಯಾತಿಯಾಗಿರುವ ಲತಾ ಮಂಗೇಶ್ಕರ್ ಸೋಮವಾರ 86ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

ಮಧ್ಯಪ್ರದೇಶದ ಇಂದೋರ್ ನಲ್ಲಿ 1929ರಲ್ಲಿ ಜನಿಸಿದ ಲತಾ ಮಂಗೇಶ್ಕರ್ ಅವರ ತಂದೆ ನಾಟಕ ಕಲಾವಿದರು ಮತ್ತು ಹಾಡುಗಾರರಾಗಿದ್ದ ದೀನನಾಥ್ ಮಂಗೇಶ್ಕರ್. ಅವರ ಸೋದರಿ ಆಶಾ ಬೋಸ್ಲೆ ಕೂಡ ಪ್ರಸಿದ್ಧ ಗಾಯಕಿ.ಲತಾ ಅವರಿಗೆ ಸಹೋದರ ಹೃದಯನಾಥ್ ಮಂಗೇಶ್ಕರ್, ಇನ್ನಿಬ್ಬರು ಸಹೋದರಿಯರಾದ ಉಷಾ ಮತ್ತು ಮೀನಾ ಮಂಗೇಶ್ಕರ್ ಕೂಡ ಹಾಡುತ್ತಾರೆ.

1942ರಲ್ಲಿ ಹಿನ್ನೆಲೆ ಗಾಯಕಿಯಾಗಿ ವೃತ್ತಿ ಜೀವನ ಆರಂಭಿಸಿದ ಲತಾ ಮಂಗೇಶ್ಕರ್ ಅವರು ನೂರಾರು ಜನಪ್ರಿಯ ಗೀತೆಗಳನ್ನು ಹಾಡಿದ್ದಾರೆ. ಅವರು ಹಾಡಿದ ಅನೇಕ ಗೀತೆಗಳು ಸಾರ್ವಕಾಲಿಕ ಉತ್ಕೃಷ್ಟವುಗಳಾಗಿವೆ.ತಮ್ಮ 6 ದಶಕಗಳಿಗೂ ಹೆಚ್ಚಿನ ವೃತ್ತಿ ಜೀವನದಲ್ಲಿ ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ದನಿಯಾಗಿರುವ ಲತಾ ಅವರು ಸುಮಾರು 36 ಭಾಷೆಗಳಲ್ಲಿ ಹಾಡಿರುವುದು ವಿಶೇಷ. ಮಧುಬಾಲಾರಿಂದ ಮೀನಾ ಕುಮಾರಿವರೆಗೆ, ನುತನ್ ಳಿಂದ ತನುಜಾವರೆಗೆ, ವೈಜಯಂತಿ ಮಾಲಾರಿಂದ ಆಶಾ ಪರೇಕ್ ವರೆಗೆ, ಹೇಮ ಮಾಲಿನಿಯಿಂದ ರೇಖಾವರೆಗೆ, ಶ್ರೀದೇವಿಯಿಂದ ಮಾಧುರಿ ದೀಕ್ಷಿತ್ ವರೆಗೆ. ಕರಿಷ್ಮಾ ಕಪೂರ್ ಳಿಂದ ಕರೀನಾ ಕಪೂರ್ ವರೆಗೆ ಪ್ರಸಿದ್ಧ ನಟ-ನಟಿಯರಿಗೆ ಚಿತ್ರಗಳಲ್ಲಿ ಹಾಡಿಗೆ ದನಿಯಾಗಿದ್ದಾರೆ.

ವಿವಿಧ ಭಾವನೆಗಳಿಗೆ ತಕ್ಕಂತೆ ಹಾಡುವ ಮೂಲಕ  ಲತಾ ಅವರು ತನ್ನ ಬಹುಮುಖ ಸಾಮರ್ಥ್ಯವನ್ನು ದೃಢಪಡಿಸಿದ್ದಾರೆ. ಅವರು ನಟಿ ಹೆಲೆನ್ ನಟಿಸಿದ ನೃತ್ಯಕ್ಕಾಗಿ ಹಾಡಿದ ಕ್ಯಾಬರೆ ಹಾಡು ಆ ಜಾನೆ ಜಾನ್ ಪಶ್ಚಮಾತ್ಯ ಶೈಲಿಯಲ್ಲಿ ಕೂಡ ಸಮಾನ ಲವಲವಿಕೆಯಿಂದ ಹಾಡಬಲ್ಲರು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಪ್ರಣಯ, ಖಿನ್ನತೆಗೆ ಒಳಗಾಗುವ ಮತ್ತು ಸಂತೋಷ ಪ್ರದರ್ಶಕ ಹಾಡುಗಳು  ಮಾಂತ್ರಿಕ ಶಕ್ತಿಯನ್ನು ಹೊಂದಿವೆ.

''ಅಯೆ ಮೇರೆ ವತನ್ ಕೆ ಲೋಗೋನ್, ಮೆಹಂದಿ ಲಗಾಕೆ ರಕ್ ನಾ, ವಂದೇ ಮಾತರಂ, ಲಾಗ್ ಜ ಗಲ್ ಸೆ, ದಿದಿ ತೇರಾ ದೇವರ್ ದಿವಾನಾ, ತುಜೆ ದೇಕಾ ತೊ ಮೊದಲಾದ ಹಾಡುಗಳು ಜನಪ್ರಿಯ.

ಲತಾ ಮಂಗೇಶ್ಕರ್ ಅವರಿಗೆ ಮುಖ್ಯವಾಗಿ 1969ರಲ್ಲಿ ಪದ್ಮ ಭೂಷಣ, 1999ರಲ್ಲಿ ಪದ್ಮ ವಿಭೂಷಣ, 1989ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, 2001ರಲ್ಲಿ ಭಾರತ ರತ್ನ ಒಲಿದು ಬಂದಿವೆ. ಇದರೊಟ್ಟಿಗೆ ಹಲವು ಬಾಲಿವುಡ್ ಪ್ರಶಸ್ತಿಗಳೂ ಸಿಕ್ಕಿವೆ.

SCROLL FOR NEXT