ನವದೆಹಲಿ: ಭಾರತ ಸ್ವತಂತ್ರ ಹೊಂದಿದ ಮೇಲೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಶಕ್ತಿ ಕ್ಷೀಣಿಸುತ್ತಲೇ ಬಂದಿದೆ. ಇತ್ತ ಪ್ರಧಾನಿ ನರೇಂದ್ರ ಮೋದಿಯವರ ಅಲೆಯನ್ನು ಎದುರಿಸಲಾಗದೆ ಕಂಗೆಟ್ಟಿರುವಾಗ, ಪಕ್ಷದಲ್ಲಿ ಫಂಡ್ ಸಮಸ್ಯೆಯೂ ಕಾಡುತ್ತಿದೆ.
ಪಕ್ಷದಲ್ಲಿನ ನಿಧಿ ಸಮಸ್ಯೆಯನ್ನು ಪರಿಹರಿಸಲು ಕಾಂಗ್ರೆಸ್ ಸಂಸದರು ದೇಣಿಗೆ ನೀಡುವಂತೆ ಪಕ್ಷ ಹೇಳಿದೆ ಎಂಬ ಸುದ್ದಿಯೂ ಇದೆ.
ಪಕ್ಷದ ನಿಧಿ ಸಮಸ್ಯೆಯನ್ನು ಹೋಗಲಾಡಿಸಲು ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲ ಕಾಂಗ್ರೆಸ್ ಸಂಸದರು ತಮ್ಮ ಒಂದು ತಿಂಗಳ ಸಂಬಳವನ್ನು ದೇಣಿಗೆಯಾಗಿ ನೀಡಬೇಕೆಂದು ಪಕ್ಷದ ಖಜಾಂಚಿ ಮೋತಿಲಾಲ್ ವೋರಾ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸುದ್ದಿ ಮೂಲಗಳ ಪ್ರಕಾರ, ದೆಹಲಿ ರಾಜ್ಯ ಯುನಿಟ್ ನಿನ್ನೆ ಸಭೆ ಸೇರಿದ್ದಾರೆ. ಈ ಸಭೆಯಲ್ಲಿ ಮಾಜಿ ರಾಜತಾಂತ್ರಿಕರು ರು. 1 ಲಕ್ಷವನ್ನು ಅಕ್ಟೋಬರ್ ಮೊದಲ ವಾರದಲ್ಲಿ ಪಕ್ಷದ ನಿಧಿಗೆ ನೀಡುವಂತೆ ಆದೇಶಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಹಿರಿಯ ನಾಯಕ ಪಿ.ಸಿ ಚಾಕೋ ಮತ್ತು ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಮಕೇನ್ ಅವರು ನಾಳೆ ವೋರಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.
ಕಳೆದ ವರ್ಷ ಸಾರ್ವತ್ರಿಕ ಚುನಾವಣೆ ನಡೆದ ನಂತರ ಕಾಂಗ್ರೆಸ್ ಪಕ್ಷ ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿಕೊಂಡಿದೆ. ಅದೇ ವೇಳೆ ಮಹಾರಾಷ್ಟ್ರ , ಹರ್ಯಾಣ, ದೆಹಲಿ, ಜಾರ್ಖಂಡ್ ಮತ್ತು ಜಮ್ಮು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್‌ಗೆ ಭಾರೀ ಆರ್ಥಿಕ ಸಂಕಷ್ಟಕ್ಕೊಳಗಾಗಿತ್ತು. ಈ ಕಾರಣದಿಂದಾಗಿಯೇ ಪ್ರಸ್ತುತ ವರ್ಷದ ಆದಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರು.250 ವಾರ್ಷಿಕ ದೇಣಿಗೆಯನ್ನು ನೀಡಲು ಪಕ್ಷ ಆದೇಶಿಸಿತ್ತು.