ದೇಶ

ಭಾರತ್ ಮಾತಾ ಕಿ ಜೈ' ಘೋಷಣೆ ಒಂದು ಧರ್ಮಕ್ಕೆ ಸೀಮಿತವಾದದ್ದಲ್ಲ: ದೇವೇಂದ್ರ ಫಡ್ನವೀಸ್

Sumana Upadhyaya

ನಾಸಿಕ್‌ (ಮಹಾರಾಷ್ಟ್ರ):  "ಭಾರತ ಮಾತಾ ಕೀ ಜೈ' ಉದ್ಘೋಷಕ್ಕೆ ಸಂಬಂಧಪಟ್ಟಂತೆ ಎದ್ದಿರುವ ವಿವಾದಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್,  ಈ ಜಯಘೋಷ ಹೇಳದವರಿಗೆ ದೇಶದಲ್ಲಿ ಇರಲು ಹಕ್ಕಿಲ್ಲ  ಎಂದು ಹೇಳಿದ್ದಾರೆ. ಈ ಘೋಷಣೆಗೂ ಧಾರ್ಮಿಕತೆಗೆ ಅಥವಾ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ.ಇದಕ್ಕೆ ಕಾಂಗ್ರೆಸ್‌ ನಾಯಕರು ಹಾಗೂ ಮುಸ್ಲಿಂ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ರಾಜ್ಯ ಮಟ್ಟದ ಕಾರ್ಯಕಾರಿ ಸಭೆಯ ನಿಮಿತ್ತ ಇಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ  ಸಂವಾದ ಯಾತ್ರೆಯ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿ, "ಭಾರತ ಮಾತಾ ಕೀ ಜೈ ಈ ಘೋಷಣೆ ಯಾವುದೇ ಒಂದು ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಭಾರತ ಮಾತಾ ಕೀ ಜೈ ಅನ್ನದಿರುವವರಿಗೆ ಈ ದೇಶದಲ್ಲಿ ಇರುವ ಅಧಿಕಾರ ಇಲ್ಲ. ಒಂದು ವೇಳೆ ಈ ದೇಶದಲ್ಲಿ ಇರಬೇಕೆಂದರೆ ಭಾರತ ಮಾತಾ ಕೀ ಜೈ ಅನ್ನಲೇಬೇಕು' ಎಂದು ಫಡ್ನವೀಸ್ ಹೇಳಿದ್ದರು.

ಕಾಂಗ್ರೆಸ್‌ ಆಕ್ಷೇಪ: ಜನರಿಗೆ ಪ್ರಜಾಸತ್ತಾತ್ಮಕ ದೇಶದಲ್ಲಿ ಯಾವುದನ್ನು ಹೇಳಬೇಕು, ಹೇಳಬಾರದು ಎಂಬ ಅಧಿಕಾರವಿದೆ. ಇಂಥದ್ದೇ ಹೇಳಿ ಎಂದು ಬಿಜೆಪಿ, ಆರೆಸ್ಸೆಸ್‌ನವರು ಒತ್ತಡ ಹೇರಿದರೆ ಅದು ಅವರಿಗೇ ತಿರುಗುಬಾಣವಾಗಲಿದೆ ಎಂಬ ಫ‌ಡ್ನವೀಸ್‌ ಹೇಳಿಕೆಗೆ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ. ಅನೇಕ ಮುಸ್ಲಿಂ ಮೌಲ್ವಿಗಳು ಕೂಡ ಸಿಎಂ ಹೇಳಿಕೆಯನ್ನು ಖಂಡಿಸಿವೆ.

ನಿನ್ನೆ ಇದಕ್ಕೆ ಸ್ಪಷ್ಟನೆ ನೀಡಿದ ಫ‌ಡ್ನವೀಸ್‌, "50 ನಿಮಿಷದ ಭಾಷಣದಲ್ಲಿ ಭಾರತ ಮಾತಾ ಕೀ ಜೈ ವಿವಾದ ಮತ್ತು ಮಹಿಳೆಯರ ದೇಗುಲ ಪ್ರವೇಶ ವಿವಾದದ ಬಗ್ಗೆ ಕೇವಲ 5 ನಿಮಿಷ ಮಾತನಾಡಿದೆ. ಇದರಲ್ಲಿನ ಆಯ್ದ ಭಾಗಗಳನ್ನಷ್ಟೇ ವರದಿ ಮಾಡಿ ಋಣಾತ್ಮಕ ವರದಿಗಾರಿಕೆ ಮಾಡಿವೆ. ತುಷ್ಟೀಕರಣ ರಾಜಕೀಯಕ್ಕೂ ಒಂದು ಮಿತಿ ಇದೆ ಎಂಬ ಅರ್ಥದಲ್ಲಿ ನಾನು ಮಾತನಾಡಿದ್ದೆ' ಎಂದು ಹೇಳಿಕೆ ಮೂಲಕ ಸ್ಪಷ್ಟಪಡಿಸಿದ್ದಾರೆ.

SCROLL FOR NEXT