ನವದೆಹಲಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ. ಮೊನ್ನೆಯಷ್ಟೇ ರಾಜ್ಯಪಾಲ ವಜುಭಾಯಿ ವಾಲಾ ಅವರ ಭೇಟಿ ದೊರೆಯದೆ ಅಸಮಾಧಾನದಿಂದ ಹಿಂತಿರುಗಿದ್ದ ದೇವೇಗೌಡರು ಮೋದಿ ಭೇಟಿ ಮಾಡಿರುವುದು ಮಹತ್ವ ಪಡೆದುಕೊಂಡಿದೆ.
ಇನ್ನು ಪ್ರಧಾನಿ ಭೇಟಿ ಬಗ್ಗೆ ಮಾಧ್ಯಮದವರು ದೇವೇಗೌಡರನ್ನು ಪ್ರಶ್ನಿಸಿದಾಗ ಕೃಷಿ ಸಂಬಂಧಿ ಸಮಸ್ಯೆಗಳನ್ನು ವಿವರಿಸಲು ಪ್ರಧಾನಿಯವರನ್ನು ಭೇಟಿ ಮಾಡಿದ್ದೇನೆ, ರಾಜ್ಯಪಾಲರ ವಿರುದ್ಧ ದೂರು ನೀಡಲು ಅಲ್ಲ. ರಾಜ್ಯಪಾಲರು ತಮಗೆ ಭೇಟಿ ನೀಡದೆ ಹೋದದ್ದೆಲ್ಲ ಸಣ್ಣ ವಿಷಯ. ಪ್ರಧಾನಿಯ ಜತೆ ಪ್ರಸ್ತಾಪ ಮಾಡುವಂತಹುದಲ್ಲ ಎಂದು ಹೇಳಿದ್ದಾರೆ.
ಮುಂಬರುವ ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇವೇಗೌಡರು ಭೇಟಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಂತರ ಹಣಕಾಸು ಸಚಿವ ಅರುಣ್ ಜೈಟ್ಲಿ ಅವರನ್ನು ಭೇಟಿ ಮಾಡಿದ ದೇವೇಗೌಡರು ಶೂನ್ಯ ಬಡ್ಡಿದರದ ಸಾಲ ಯೋಜನೆಯಲ್ಲಿ ರಾಜ್ಯಕ್ಕೆ ನೀಡಬೇಕಾದ ಮೊತ್ತದಲ್ಲಿ ನಬಾರ್ಡ್ ಮಾಡಿರುವ ಶೇ.10ರಷ್ಟು ಖೋತಾವನ್ನು ರದ್ದು ಮಾಡಿ ಪೂರ್ಣ ಮೊತ್ತ ನೀಡುವಂತೆ ಕೋರಿದ್ದಾರೆ.