ನವದೆಹಲಿ: ಬರಗಾಲದ ಕುರಿತ ವಿಚಾರಣೆಗೆ ಕೇಂದ್ರ ಸರ್ಕಾರ ಪರ ವಕೀಲರು 15 ನಿಮಿಷ ತಡವಾಗಿ ಹೋದದ್ದಕ್ಕೆ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
'' ವಿಷಯದ ಗಾಂಭೀರ್ಯತೆಯನ್ನು ಅರ್ಥ ಮಾಡಿಕೊಳ್ಳಿ, ಇಲ್ಲಿ ಕೂತ ನಾವೇನು ನಿಷ್ಪ್ರಯೋಜಕರೇ'' ಎಂದು ವಕೀಲರು ಇನ್ನೊಂದು ಕೋರ್ಟ್ ರೂಂನಲ್ಲಿದ್ದು, ಬರಲು ಸ್ವಲ್ಪ ತಡವಾಗುತ್ತದೆ, ಸ್ವಲ್ಪ ಕಾಲಾವಕಾಶ ನೀಡಿ ಎಂದು ಕೇಳಿದ್ದಕ್ಕೆ ನ್ಯಾಯಾಧೀಶರು ಸಿಟ್ಟಿನಿಂದ ಹೀಗೆ ಕೇಳಿದರು.
ಇದೇನು ದನದ ಕೊಟ್ಟಿಗೆಯೇ, ಅಲ್ಲಿ, ಇಲ್ಲಿ ಹೋಗಲು, ಇದು ನಿಮಗೆ ಮುಖ್ಯವಾದ ವಿಷಯವಲ್ಲವೇ? ಇಬ್ಬರು ನ್ಯಾಯಾಧೀಶರು ಇಲ್ಲಿ ಕುಳಿತಿದ್ದಾರೆ. ನೀವು ನಮ್ಮಿಂದ ಏನನ್ನೂ ನಿರೀಕ್ಷಿಸುವುದಿಲ್ಲವೇ? ಸುಮ್ಮನೆ ವಾಚು ನೋಡಿಕೊಂಡು ಸಮಯ ಕಳೆಯುತ್ತೀರಾ? ಎಂದು ನ್ಯಾಯಾಧೀಶರು ಸಿಟ್ಟಿನಿಂದಲೇ ಕೇಳಿದರು.
ಆಗ ತಕ್ಷಣವೇ ಹೆಚ್ಚುವರಿ ಸಾಲಿಸಿಟರ್ ಜನರಲ್ ಆತುರಾತುರವಾಗಿ ಕೋರ್ಟ್ ರೂಂಗೆ ಬಂದು ವಾದ ಮಂಡಿಸಲು ಸಿದ್ದ ಎಂದರು. ಆಗ ನ್ಯಾಯಾಧೀಶರು, 15 ನಿಮಿಷ ವಾದ ಮಾಡಿ ಹೋಗಬೇಡಿ, ನಮ್ಮ ಸಮಯ ಕೂಡ ತುಂಬಾ ಮುಖ್ಯ ಎಂದರು.
ದೇಶದ 10 ರಾಜ್ಯಗಳನ್ನು ಬರಗಾಲಪೀಡಿತವೆಂದು ಘೋಷಿಸಲಾಗಿದ್ದು, ಇಲ್ಲಿನ ರೈತರಿಗೆ ಪರಿಹಾರ ಬಿಡುಗಡೆ ಮಾಡಬೇಕೆಂದು ಆಮ್ ಆದ್ಮಿ ಪಕ್ಷದ ಮಾಜಿ ನಾಯಕ ಯೋಗೇಂದ್ರ ಯಾದವ್ ಅವರ ಸ್ವರಾಜ್ ಅಭಿಯಾನ್ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ದೇಶ ಬರಗಾಲ ಪರಿಸ್ಥಿತಿ ಎದುರಿಸುತ್ತಿರುವಾಗ ಕುರುಡರಂತೆ ವರ್ತಿಸಿಕೊಂಡು ಸರ್ಕಾರ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಕೋರ್ಟ್ ಸರ್ಕಾರಕ್ಕೆ ಹೇಳಿತ್ತು.
ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹಣವನ್ನು ಕಳೆದ ವರ್ಷದಿಂದ ಸರಿಯಾಗಿ ಬಿಡುಗಡೆ ಮಾಡಿಲ್ಲ. ಸರಿಯಾದ ಉದ್ಯೋಗ ಸಿಗದೆ, ಹೊಟ್ಟೆಗೆ ಆಹಾರ ಸಿಗದೆ ಜನರು ವಲಸೆ ಹೋಗುತ್ತಿದ್ದಾರೆ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಕೋರ್ಟ್ ಗೆ ವಿವರ ನೀಡಿದರು.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪರ ವಕೀಲ ಮಾತನಾಡಿ, ಈ ವಾರಾಂತ್ಯದೊಳಗೆ ಸುಮಾರು 8 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ ಕೂಲಿ ಕಾರ್ಮಿಕರಿಗೆ ಬಾಕಿ ಇರುವ ವೇತನ ನೀಡಲಾಗುವುದು. ಉದ್ಯೋಗ ಯೋಜನೆಯಡಿ ಹೊಸ ಕೆಲಸಗಳಿಗೆ ರಾಜ್ಯಗಳಿಗೆ 3 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.