ದೇಶ

ಏರ್ ಇಂಡಿಯಾ ವಿಮಾನ ಸ್ಥಳಾಂತರ ವೇಳೆ ಕುಸಿದ ಕ್ರೇನ್; ತಪ್ಪಿದ ಭಾರಿ ಅನಾಹುತ

Srinivasamurthy VN

ಹೈದರಾಬಾದ್: ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ತರಬೇತಿ ವಿಮಾನವನ್ನು ಬೇಗಂ ಪೇಟ್ ವಿಮಾನ ನಿಲ್ದಾಣಕ್ಕೆ ಸಾಗಿಸುತ್ತಿದ್ದ ವೇಳೆ ವಿಮಾನ ಆಯತಪ್ಪಿ ಕೆಳಗೆ ಬಿದ್ದ ಘಟನೆ   ನಡೆದಿದೆ.

ಏರ್ ಇಂಡಿಯಾ ಸಂಸ್ಥೆಗೆ ಸೇರಿದ ಲಘು ವಿಮಾನವೊಂದನ್ನು ದುರಸ್ತಿಗಾಗಿ ಬೇಗಂ ಪೇಟ್ ವಿಮಾನ ನಿಲ್ದಾಣದಲ್ಲಿರುವ ಶೆಡ್ ಗೆ ಕ್ರೇನ್ ಮೂಲಕ ಸಾಗಿಸುತ್ತಿದ್ದ  ವೇಳೆ ಈ ದುರ್ಘಟನೆ  ಸಂಭವಿಸಿದ್ದು, ಅದೃಷ್ಟವಶಾತ್ ಘಟನೆ ವೇಳೆ ಅಲ್ಲಿ ಯಾರೂ ಇಲ್ಲದ ಕಾರಣ ಆಗ ಬಹುದಾಗಿದ್ದ ಭಾರಿ ಅನಾಹುತ ತಪ್ಪಿದಂತಾಗಿದೆ.

ಮೂಲಗಳ ಪ್ರಕಾರ ಏರ್ ಇಂಡಿಯಾ ಶೆಡ್ ನಲ್ಲಿದ್ದ ವಿಮಾನವನ್ನು ಸಂಸ್ಥೆ ಸಿಬ್ಬಂದಿಗಳ ತರಬೇತಿಗೆ ಬಳಕೆ ಮಾಡಲು ನಿರ್ಧರಿಸಿತ್ತು. ಈ ಹಿನ್ನಲೆಯಲ್ಲಿ ವಿಮಾನವನ್ನು ಬೇಗಂ ಪೇಟ್ ನಲ್ಲಿರುವ  ವಿಮಾನ ದುರಸ್ತಿ ಮಾಡುವ ಶೆಡ್ ರವಾನಿಸಲು ಸಂಸ್ಥೆ ಮುಂದಾಗಿತ್ತು. ಹೀಗಾಗಿ ಕ್ರೇನ್ ಮೂಲಕ ವಿಮಾನವನ್ನು ರವಾನಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ವಿಮಾನವನ್ನು ಸಾಗಿಸುತ್ತಿದ್ದ  ಕ್ರೇನ್ ಆಯತಪ್ಪುತ್ತಿದ್ದಂತೆಯೇ ವಿಮಾನ ಪಕ್ಕದಲ್ಲಿಯೇ ಇದ್ದ ಟಿಟಿಡಿಗೆ ಸೇರಿದ ಶಾಲೆಯ ಕಾಂಪೌಂಡ್ ಮೇಲೆ ಬಿದ್ದಿದೆ. ಘಟನೆಯಿಂದಾಗಿ ವಿಮಾನ ಸಾಗಿಸುತ್ತಿದ್ದ ಕ್ರೇನ್ ಗೆ ಹಾನಿಯಾಗಿದ್ದು, ವಿಮಾನ ರಸ್ತೆಯ ಮೇಲೆ ಬಿದ್ದಿದ್ದರಿಂದ ಈ ಭಾಗದಲ್ಲಿ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು.

ಬಳಿಕ ಮತ್ತೊಂದು ಕ್ರೇನ್ ನ ಸಹಾಯಪಡೆದು ವಿಮಾನವನ್ನು ಅಲ್ಲಿಂದ ಸ್ಥಳಾಂತರಿಸಲಾಯಿತು.

SCROLL FOR NEXT