ದೇಶ

ಉಗ್ರರ ಒಳನುಸುಳುವಿಕೆ ತಡೆಗಟ್ಟಲು ಭಾರತದ 5 ಪದರದ ಬೀಗ

Sumana Upadhyaya

ನವದೆಹಲಿ: ಭಾರತ-ಪಾಕಿಸ್ತಾನ ಗಡಿಯಲ್ಲಿರುವ 2 ಸಾವಿರದ 900 ಕಿಲೋ ಮೀಟರ್ ಉದ್ದದ ಪಶ್ಚಿಮ ಗಡಿ ಭಾಗದಲ್ಲಿ ಸಂಪೂರ್ಣವಾಗಿ ಉಗ್ರರ ಒಳನುಸುಳುವಿಕೆಯನ್ನು ತಪ್ಪಿಸಲು ಐದು ಪದರದ ಬೀಗಮುದ್ರೆ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ಭವಿಷ್ಯದಲ್ಲಿ ಪಠಾಣ್ ಕೋಟ್ ಮಾದರಿಯ ಉಗ್ರರ ದಾಳಿಯನ್ನು ಮತ್ತು ಕಳ್ಳಸಾಗಣೆಯನ್ನು ತಪ್ಪಿಸಲು ಭಾರತದ ಪಶ್ಚಿಮ ಭಾಗದ ಗಡಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ ತಡೆಬೇಲಿಯನ್ನು ನಿರ್ಮಿಸಲಾಗುತ್ತಿದೆ. ಅಲ್ಲದೆ ಇಲ್ಲಿ ಸೈನಿಕರು ದಿನದ 24 ಗಂಟೆಗಳ ಕಾಲವೂ ನಿಗಾ ವಹಿಸಲಿದ್ದಾರೆ.

ಗಡಿಭಾಗದಲ್ಲಿ ಸಿಸಿಟಿವಿ ಕ್ಯಾಮರಾ, ಥರ್ಮಲ್ ಚಿತ್ರ, ರಾತ್ರಿ ದೃಷ್ಟಿ ಸಾಧನ, ಯುದ್ಧಭೂಮಿ ನಿಗಾ ರಾಡಾರ್, ಭೂಗರ್ಭ ಮಾನಿಟರಿಂಗ್ ಸಂವೇದಕ, ಲೇಸರ್ ತಡೆಗಳನ್ನು ನಿರ್ಮಿಸಿ ಇನ್ನೊಂದು ಭಾಗದಲ್ಲಿ ಯಾರದ್ದಾದರೂ ಚಲನವಲನಗಳನ್ನು ಅದು ಪರಿಶೀಲಿಸಲಿದೆ. ಒಂದು ವೇಳೆ ಸಾಧನ ಕೆಲಸ ಮಾಡದಿರುವಾಗ ಯಾರಾದರೂ ಒಳನುಸುಳಲು ಯತ್ನಿಸಿದರೆ ಕೂಡಲೇ ಕಂಟ್ರೋಲ್ ರೂಂಗೆ ಸಂದೇಶ ಹೋಗುತ್ತದೆ. ಲೇಸರ್ ತಡೆಗೋಡೆಗಳು ಭಾರತ-ಪಾಕ್ ಗಡಿಭಾಗದಲ್ಲಿರುವ ನದಿಪಾತ್ರಗಳು, ಜಮ್ಮು-ಕಾಶ್ಮೀರದಿಂದ ಗುಜರಾತ್ ವರೆಗಿನ ಪರ್ವತ ಪ್ರದೇಶ ಸೇರಿದಂತೆ 130 ಬೇಲಿ ಹಾಕದಿರುವ ವಲಯಗಳನ್ನು ಆವರಿಸುತ್ತದೆ. ಈ ಭಾಗಗಳನ್ನೇ ಉಗ್ರರು ಮತ್ತು ಒಳನುಸುಳುಕೋರರು ಹೆಚ್ಚಾಗಿ ಬಳಸುವುದು.

ವರ್ಷಪೂರ್ತಿ ದಿನದ 24 ಗಂಟೆಗಳ ಕಾಲ ತಂತ್ರಜ್ಞಾನದ ಮೂಲಕ ಗಡಿಭಾಗಗಳ ಕಣ್ಗಾವಲು ಮಾಡುವ ವಿಸ್ತಾರವಾದ ಆಂತರಿಕ ಗಡಿ ನಿರ್ವಹಣಾ ವ್ಯವಸ್ಥೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಭವಿಷ್ಯದಲ್ಲಿ ಪಠಾಣ್ ಕೋಟ್ ನಂತಹ ಸಂಭಾವ್ಯ ದಾಳಿಯನ್ನು ತಡೆಗಟ್ಟಲು ಈ ಕ್ರಮಕ್ಕೆ ರಕ್ಷಣಾ ಇಲಾಖೆ ಮುಂದಾಗಿದೆ. ಇದು ತುಸು ವೆಚ್ಚ ಅನಿಸಿದರೂ ಸಂಭಾವ್ಯ ದಾಳಿಯನ್ನು ತಡೆಗಟ್ಟಲು ಇದೊಂದೇ ಮಾರ್ಗವೆಂದು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಕುತೂಹಲಕಾರಿ ವಿಷಯವೆಂದರೆ ಸ್ವಾತಂತ್ರ್ಯ ಬಂದ ಮೇಲೆ ಪಶ್ಚಿಮ ಗಡಿಭಾಗವನ್ನು ಭಾರತ ಸಂಪೂರ್ಣವಾಗಿ  ಮುಚ್ಚುತ್ತಿರುವುದು ಇದೇ ಮೊದಲು.

SCROLL FOR NEXT