ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರೇ ಎರಡನೇ ಬಾರಿ ಅಧಿಕಾರಕ್ಕೇರಲಿದ್ದಾರೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಆದರೆ ಅವರ ಪಕ್ಷದಲ್ಲೇ ಭಿನ್ನಾಭಿಪ್ರಾಯ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ಎಡರಂಗ ಹಾಗೂ ಕಾಂಗ್ರೆಸ್ ಮೈತ್ರಿಕೂಟ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯದಿದ್ದರೂ ಪ್ರಮುಖ ಪ್ರತಿಸ್ಪರ್ಧಿಯಾಗಲಿದೆ ಎಂದು ಭವಿಷ್ಯ ನುಡಿಯಲಾಗಿದೆ.
ಮಮತಾ ಬ್ಯಾನರ್ಜಿ ಅವರ ಜನ್ಮ ದಿನಾಂಕ ಜನವರಿ 5, 1955. ಆದರೆ ಅವರ ಜನ್ಮ ದಿನಾಂಕ ಹಾಗೂ ಸಮಯಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲೆ ಇಲ್ಲ. ಹೀಗಾಗಿ ಜ್ಯೋತಿಷಿಗಳು ಇತರೆ ಅಂಶಗಳನ್ನು ಸಹ ಪರಿಗಣಿಸಿದ್ದಾರೆ. ಸಿಪಿಐಎಂ ರಾಜ್ಯ ಕಾರ್ಯದರ್ಶಿ ಹಾಗೂ ಎಡರಂಗ, ಕಾಂಗ್ರೆಸ್ ಮೈತ್ರಿಕೂಟದ ಸಿಎಂ ಅಭ್ಯರ್ಥಿ ಸೂರಜಕಾಂತ್ ಮಿಶ್ರ ಅವರ ಜನ್ಮ ದಿನ ಏಪ್ರಿಲ್ 18, 1949. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಧಿರ್ ಚೌಧರಿ ಅವರ ಜನ್ಮ ದಿನ ಏಪ್ರಿಲ್ 2, 1956.
ಕಳೆದ ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ ಮಮತಾ ಅವರ ಟೈಮ್ ಚೆನ್ನಾಗಿತ್ತು. ಆದರೆ ನಂತರ ಅಷ್ಟು ಒಳ್ಳೆಯ ದಿನಗಳು ಇರಲಿಲ್ಲ. ಆದರೆ ಏಪ್ರಿಲ್ 3ರಿಂದ ಅವರಿಗೆ ಮತ್ತೆ ಒಳ್ಳೆಯ ಟೈಮ್ ಬಂದಿದ್ದು, ಈ ಬಾರಿಯೂ ತೃಣಮೂಲ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಆದರೆ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಜ್ಯೋತಿಷಿ ದೇಬಶಿಶ್ ಸೇನ್ ಅವರು ವಿವರಿಸಿದ್ದಾರೆ.