ದೇಶ

'ಭಾರತ್ ಮಾತಾ ಕಿ ಜೈ' ಕೂಗುವವರ ವಿರುದ್ಧ ಕೇಸ್ ಒಪ್ಪಲಾಗದು: ಆಪ್ ಸಚಿವರು

Manjula VN

ಜಮ್ಮು: 'ಭಾರತ್ ಮಾತಾ ಕಿ ಜೈ' ಘೋಷಣೆ ಕೂಗುವ ವಿದ್ಯಾರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದನ್ನು ಒಪ್ಪುವುದಿಲ್ಲ ಎಂದು ದೆಹಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಸಚಿವರು ಬುಧವಾರ ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಕಪಿಲ್ ಮಿಶ್ರಾ ಅವರು, ವಿದ್ಯಾರ್ಥಿಗಳ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಬೇಕು. ವಿದ್ಯಾರ್ಥಿಗಳಿಗೆ ಭದ್ರತೆಯನ್ನು ನೀಡುವ ಅಗತ್ಯವಿದೆ. ಶ್ರೀನಗರದ ಎನ್ಐಟಿ ಕಾಲೇಜಿನಲ್ಲಿ ತ್ರಿವರ್ಣ ಧ್ವಜ ಹಾರಬೇಕೆಂಬುದು ವಿದ್ಯಾರ್ಥಿಗಳು ಆಗ್ರಹವಾಗಿದೆ. ಇದನ್ನು ಸರ್ಕಾರ ಈಡೇರಿಸಬೇಕು. ಅದನ್ನು ಬಿಟ್ಟು ವಿದ್ಯಾರ್ಥಿಗಳ ವಿರುದ್ಧವೇ ಪೊಲೀಸರು ಲಾಠಿಚಾರ್ಜ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
 
ವಿದ್ಯಾರ್ಥಿಗಳು ಭಾರತದ ಪರ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳ ವಿರುದ್ಧವೇ ಇಂದು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಇದನ್ನು ಎಂದಿಗೂ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಸರ್ಕಾರಕ್ಕೆ ಪ್ರಶ್ನೆ ಹಾಕಿರುವ ಅವರು, ಕಾಲೇಜು ಆವರಣದಲ್ಲಿ ದೇಶದ ಪರ ಘೋಷಣೆ ಕೂಗಿದವರು ಹಾಗೂ ತ್ರಿವರ್ಣ ಧ್ವಜ ಹಾರಿಸದವರನ್ನು ಇಂದು ಬಲವಂತವಾಗಿ ಶ್ರೀನಗರ ಬಿಟ್ಟು ಹೋಗುವಂತೆ ಮಾಡುತ್ತಿರುವುದೇಕೆ. ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ ಎಲ್ಲಾ ಪೊಲೀಸರನ್ನು ಕರ್ತವ್ಯದಿಂದ ತೆಗೆದು ಹಾಕಬೇಕು.

ಕಳೆದೆರಡು ದಿನ ನಾನು ಕಾಶ್ಮೀರದಲ್ಲಿದ್ದೆ. ವಿಮಾನ ನಿಲ್ದಾಣದಲ್ಲಿ ಹಲವು ವಿದ್ಯಾರ್ಥಿಗಳು ಶ್ರೀನಗರ ಬಿಟ್ಟು ಕಾಶ್ಮೀರಕ್ಕೆ ಬರುತ್ತಿರುವುದು ಕಾಣಿಸಿತು. ನಮಗೆ ವಿದ್ಯಾರ್ಥಿಗಳ ಭವಿಷ್ಯ ಮುಖ್ಯವಾಗಿದ್ದು, ಈ ವಿಚಾರದಲ್ಲಿ ಎಂದಿಗೂ ರಾಜಿಯಾಗಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ವಿರುದ್ಧವಿರುವ ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳ ಪರವಾಗಿ ನಾವು ಎಂದಿಗೂ ಇರುತ್ತೇವೆ. ಅವರ ಪ್ರತಿಭಟನೆಗೆ ಸಾಥ್ ನೀಡುತ್ತೇವೆ. ಬಿಜೆಪಿ ದ್ವಿಗುಣ ಅಜೆಂಡಾವನ್ನು ಬಹಿರಂಗ ಪಡಿಸುತ್ತೇವೆ. ಇಂದು ನಾನು ಇಲ್ಲಿರುವುದು ಓರ್ವ ಭಾರತೀಯನಾಗಿಯೇ ಹೊರತು, ಆಮ್ ಆದ್ಮಿ ಪಕ್ಷ ಸದಸ್ಯನಾಗಿ ಅಲ್ಲ. ನಾನು ಆಪ್ ಪಕ್ಷ ಬಿತ್ತಿಚಿತ್ರ ಹಿಡಿದಿಲ್ಲ. ರಾಷ್ಟ್ರ ಧ್ವಜವನ್ನು ಹಿಡಿದಿದ್ದೇನೆ. ವಿದ್ಯಾರ್ಥಿಗಳ ಹೋರಾಟಕ್ಕೆ ಬಿಜೆಪಿ ಹಾಗೂ ಆರ್ ಎಸ್ಎಸ್ ಕೈ ಜೋಡಿಸುವಂತೆ ಮನವಿ ಮಾಡುತ್ತೇನೆಂದು ಹೇಳಿದ್ದಾರೆ.

ಇದರಂತೆ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರು ಮಾತನಾಡಿದ್ದು, ಕೇಂದ್ರೀಯ ಎಲ್ಲಾ ವಿಶ್ವವಿದ್ಯಾಲಯಗಳಲ್ಲೂ ತ್ರಿವರ್ಣ ಧ್ವಜ ಹಾರುತ್ತಿದೆ. ಆದರೆ, ಶ್ರೀನಗರದಲ್ಲಿರುವ ಎನ್ಐಟಿ ಕಾಲೇಜಿನಲ್ಲಿ ಮಾತ್ರ ತ್ರಿವರ್ಣ ಧ್ವಜವಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ. ಈಗಾಗಲೇ ಎನ್ಐಟಿ ಘರ್ಷಣೆ ವೇಳೆ ಗಾಯಗೊಂಡ ವಿದ್ಯಾರ್ಥಿಗಳಿಗೆ ದೆಹಲಿಯಲ್ಲಿ ಉತ್ತಮ ಚಿಕಿತ್ಸೆ ಕೊಡಿಸಲು ನಿರ್ಧರಿಸಲಾಗಿದೆ. ಇದೀಗ ನಾನು ದೆಹಲಿಗೆ ಹೋಗುತ್ತಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಚಿಕಿತ್ಸೆ ಕೊಡಿಸಲಾಗುತ್ತದೆ ಎಂದು ಹೇಳಿದ್ದಾರೆ.

SCROLL FOR NEXT