ಚಂಡೀಗಢ: ಹರ್ಯಾಣ ಸರ್ಕಾರ ಗುರುಗಾಂವ್ ಗೆ ಗುರುಗ್ರಾಮವೆಂದು ಮರುನಾಮಕರಣ ಮಾಡಲು ನಿರ್ಧರಿಸಿದೆ. ಮನೋಹರ್ ಲಾಲ್ ಕಟ್ಟರ್ ನೇತೃತ್ವದ ಸರ್ಕಾರ ಗುರುಗಾಂವ್ ನ ಹೆಸರನ್ನು ಗುರುಗ್ರಾಮವೆಂದು ಮರುನಾಮಕರಣ ಮಾಡಿರುವುದರ ಹಿಂದೆ ಭಗವದ್ಗೀತೆ, ದ್ರೋಣಾಚಾರ್ಯರು ಸೇರಿದಂತೆ ಅನೇಕ ಕಾರಣಗಳಿವೆ.
ಗುರುಗಾಂವ್ ಗೆ ಮರು ನಾಮಕರಣ ಮಾಡುವುದಕ್ಕೆ ಸಾರ್ವಜನಿಕರ ಆಗ್ರಹವೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಗುರುಗಾಂವ್ ಗೆ ಗುರುಗ್ರಾಮವೆಂದೇ ಮರುನಾಮಕರಣ ಮಾಡಬೇಕೆಂಬ ಸಲಹೆ ಬಂದಿದ್ದರ ಹಿನ್ನೆಲೆಯಲ್ಲಿ ಇದೇ ಹೆಸರನ್ನು ಸೂಚಿಸಲಾಗಿದೆ ಎಂದು ಹರ್ಯಾಣ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಇನ್ನು ಹರ್ಯಾಣ ಭಗವದ್ಗೀತೆ ಹಾಗೂ ಕಲಿಕಾ ಕೇಂದ್ರಕ್ಕಾಗಿ ವಿಶೇಷವಾದ ಪ್ರಸಿದ್ಧಿ ಪಡೆದಿದೆ. ಮಹಾಭಾರತದ ಗುರು ದ್ರೋಣಾಚಾರ್ಯರ ಕಾಲದಿಂದಲೂ ಗುರುಗಾಂವ್ ನ ಪ್ರದೇಶ ರಾಜಕುಮಾರರಿಗೆ ಶಿಕ್ಷಣ ಕೊಡಿಸುವ ವಿಷಯಕ್ಕಾಗಿ ಪ್ರಸಿದ್ಧಿ ಪಡೆದಿತ್ತು. ಆದ್ದರಿಂದ ಗುರುಗಾಂವ್ ಗೆ ಗುರುಗ್ರಾಮವೆಂದು ಮರುನಾಮಕಾರಣ ಮಾಡಲಾಗಿರುವುದನ್ನು ಸರ್ಕಾರ ಸಮರ್ಥಿಸಿಕೊಂಡಿದೆ.