ನವದೆಹಲಿ: ಕೇಂದ್ರ ಸರ್ಕಾರ ಕಾಂಗ್ರೆಸ್ ಪಕ್ಷದ ಕೆಂಗಣ್ಣಿಗೆ ಗುರಿಯಾಗುವಂತಹ ಮತ್ತೊಂದು ನಿರ್ಧಾರ ಕೈಗೊಂಡಿದ್ದು, ಇಂದಿರಾ ಗಾಂಧಿ ರಾಷ್ಟ್ರೀಯ ಕಲಾಕೇಂದ್ರದ ಮಂಡಳಿಯನ್ನು ವಿಸರ್ಜನೆಗೊಳಿಸಿದೆ.
ಐಜಿಎನ್ ಸಿಎ ಮಂಡಳಿಯನ್ನು ವಿಸರ್ಜಿಸಿರುವ ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ, 20 ಸದಸ್ಯರ ಹೊಸ ತಂಡವನ್ನು ನೇಮಕ ಮಾಡಿದ್ದಾರೆ. ಇನ್ನು ಖ್ಯಾತ ಪತ್ರಕರ್ತ, ಗಾಂಧಿವಾದಿ, ರಾಮ್ ಬಹದ್ದೂರ್ ರೈ ಅವರನ್ನು ಐಜಿಎನ್ ಸಿಎಯ ಮುಂದಿನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸಚಿವ ಮಹೇಶ್ ಶರ್ಮಾ, ಮಂಡಳಿಯ ಸದಸ್ಯರನ್ನು ಹೊಸದಾಗಿ ನೇಮಕ ಮಾಡುವುದು, ಅಧ್ಯಕ್ಷರ ನೇಮಕಾತಿ ಹೊಸದೇನಲ್ಲ, ಅದೊಂದು ನಿರಂತರ ಪ್ರಕ್ರಿಯೆ, ಈ ಹಿಂದೆಯೂ ಇಂತಹ ಪ್ರಕ್ರಿಯೆಗಳು ನಡೆದಿತ್ತು ಎಂದು ಹೇಳಿದ್ದಾರೆ.
ಐಜಿಎನ್ ಸಿಎ ಇನ್ನು ಮುಂದಿನ ದಿನಗಳಲ್ಲಿ ಹೊಸ ಬದಲಾವಣೆಗಳನ್ನು ನೋಡಲಿದ್ದು ಅದರ ಸ್ಥಾಪನೆಯ ಉದ್ದೇಶ ಈಡೇರಲಿದೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿಕೆ ನೀಡಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ನೆನಪಿಗಾಗಿ 1985 ರ ನವೆಂಬರ್ 19 ರಂದು ಐಜಿಎನ್ ಸಿಎ ನ್ನು ಸ್ಥಾಪಿಸಲಾಗಿತ್ತು.